ಸಮಾಜಕ್ಕೆ ಮಧು ಜಿ.ಮಾದೇಗೌಡರ ಕೊಡುಗೆ ಅನನ್ಯ

27M.D.R.1
Published on

ಮದ್ದೂರು: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಭಾರತಿ ಎಜುಕೇಷನ್ ಟ್ರಸ್ಟ್, ಅಂಗ ಸಂಘ-ಸಂಸ್ಥೆಗಳ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿಗಳ ವೃಂದ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ, ಶ್ರೀಆಶಯ್ ಮಧು ಜಿ.ಮಾದೇಗೌಡ ಅಭಿಮಾನಿಗಳ ಬಳಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮದ್ದೂರು ಪುರಸಭೆ, ಆಸ್ಟರ್ ಜಿ.ಮಾದೇಗೌಡ ಹಾಸ್ಪಿಟಲ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಂಡರು.

ಶಿಬಿರದಲ್ಲಿ ಮೂಳೆ ಮತ್ತು ಕೀಲು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳು, ಹೃದಯ, ದಂತ, ಮೂತ್ರಪಿಂಡ ತಜ್ಞರು, ಕಿವಿ, ಮೂಗು, ಗಂಟಲು ಮತ್ತು ಚರ್ಮರೋಗಗಳಿಗೆ ಚಿಕಿತ್ಸೆ ಹಾಗೂ ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ, ಸಂವಾದಾತ್ಮಕ ಆರೋಗ್ಯ ಮಾತುಕತೆಗಳು, ಆರೋಗ್ಯ ಶಿಕ್ಷಣ ಮತ್ತು ಜಾಗೃತಿ, ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸೆ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ನೀಡಲಾಯಿತು.

ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು ಮಾತನಾಡಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾಜಕ್ಕೆ ತಮ್ಮದೆಯಾದ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸುತ್ತಿರುವುದು ಪ್ರಸಂಶನೀಯ ಸಂಗತಿಯಾಗಿದ್ದು, ಮುಂದೆಯೂ ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸಲಿ ಎಂದು ಆಶಿಸಿದರು.

ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಹೆಲ್ತ್ ಕಿಟ್ ನೀಡಲಾಯಿತು. ಆಶಾ ಕಾರ್ಯಕರ್ತೆಯರಿಗೆ ಹ್ಯಾಂಡ್‌ಬ್ಯಾಗ್ ವಿತರಣೆ ಮಾಡಲಾಯಿತು ಹಾಗೂ ಮಧ್ಯಾಹ್ನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶ್ರದ್ಧಾಂಜಲಿ: ಆರೋಗ್ಯ ಶಿಬಿರದ ಆರಂಭಕ್ಕೂ ಮೊದಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪುರಸಭಾ ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್, ಹಿರಿಯ ಮುಖಂಡ ವಿಜೇಂದ್ರ, ತಾಪಂ ಮಾಜಿ ಸದಸ್ಯರಾದ ಭರತೇಶ್, ಚಿಕ್ಕಮರಿಯಪ್ಪ, ಮುಖಂಡರಾದ ಕುದರಗುಂಡಿ ಶ್ರೀಧರ್, ಅಭಿಷೇಕ್, ನಾಗಭೂಷಣ್, ಎಸ್.ಸಿ.ರಮೇಶ್, ಸತೀಶ್, ಸಿದ್ದು, ಗೋಪಿ, ಅವಿನಾಶ್, ಕಬ್ಬಾಳಯ್ಯ, ಮಹೇಂದ್ರ, ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ತಮಿಳ್ಮಣಿ, ಪ್ರಾಂಶುಪಾಲ ಮಹೇಶ್ ಕುಮಾರ್, ಅಧಿಕಾರಿ ಮಹೇಂದ್ರ, ವೈದ್ಯರಾದ ಡಾ.ವೆಂಕಟೇಶ್, ಡಾ.ಎಂ.ಎಸ್.ರಾಜು, ಡಾ.ಮಹೇಶ್, ಡಾ.ಎಂ.ಶ್ವೇತಾ, ಡಾ.ಮೌರ್ಯ, ಡಾ.ಅಭಿಜಿತ್, ಡಾ.ಮನು, ಡಾ.ಪ್ರೀತಮ್, ಡಾ.ಶಿಲ್ಪಾ, ಡಾ.ಜಿತೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net