ಸಮಾಜಕ್ಕೆ ನಮ್ಮ ಕೊಡುಗೆ ಏನೆಂಬುದನ್ನು ಅರಿತುಕೊಳ್ಳಿ

24-pnp 1
Published on

ಪಾಂಡವಪುರ: ಸಮಾಜವನ್ನು ಯಾವ ರೀತಿ ಕಟ್ಟಬೇಕು, ಅದಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಯುವಜನತೆ ಅರಿತುಕೊಳ್ಳಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.


ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ಏನೇ ಬದಲಾವಣೆ ತರಬೇಕಾದರೂ ಅದರಲ್ಲಿ ಯುವಜನತೆ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಯುವಕರು ಒತ್ತಡಗಳಿಗೆ ತಲೆಕೆಡಿಸಿಕೊಳ್ಳದೆ ಖುಷಿ ಕೊಡುವ ಮತ್ತು ಹೃದಯಕ್ಕೆ ಹತ್ತಿರವಾದ ಕೆಲಸಗಳನ್ನು ಪ್ರೀತಿಯಿಂದ ಇಷ್ಟಪಟ್ಟು ಮಾಡಬೇಕು. ಎಷ್ಟೇ ವಯಸ್ಸಾದರೂ ಕಲಿಯಬೇಕು ಎಂಬ ಹಂಬಲವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಎಂತಹ ಕಷ್ಟದ ಸಮಸ್ಯೆಯಾದರೂ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ಅದನ್ನು ಮನಗಂಡರೆ ಜೀವನದ ಸಾಧನೆಯ ಹಾದಿಯಲ್ಲಿ ನಡೆಯಬಹುದು ಎಂದು ಸಲಹೆ ನೀಡಿದರು.


ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯಗಳ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಸ್ಥಳದಲ್ಲೇ ಪರಿಹಾರ ಸೂಚಿಸಿದರು.


ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಮಾತನಾಡಿ, ಭಾರತ ತತ್ವಶಾಸ್ತ್ರ, ಸ್ವಯಂ ಆಡಳಿತ ಮತ್ತು ಸಂವಿಧಾನದ ತಾಯಿ ಇದ್ದಂತೆ. ಭಾರತದ ಜನ ಮನಃಶಕ್ತಿ ಹಾಗೂ ಬುದ್ಧಿಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಅವಕಾಶಗಳನ್ನು ಬಳಸಿಕೊಂಡರೆ ಬಾಳು ಭವ್ಯವಾಗುತ್ತದೆ ಎಂದರು.


ಕುವೆಂಪು ಅವರು ರಾಮಾಯಣ ದರ್ಶನಂ ಮರೆತರೂ ವಿಶ್ವ ಮಾನವ ಸಂದೇಶವನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದರು. ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣಸೃಷ್ಟಿ ಈ ಪಂಚಮಂತ್ರಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಸಾಹಿತಿ ಚಿಕ್ಕಮರಳಿ ಬೋರೇಗೌಡ ಮಾತನಾಡಿ, ರಾಜ್ಯಾದಾದ್ಯಂತ ಇರುವ ಪದವಿಪೂರ್ವ ಕಾಲೇಜುಗಳಿಗೆ ಸರ್ಕಾರ ಈವರೆಗೂ ಕ್ರೀಡಾ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಲ್ಲ. ಆದರೆ ಖಾಸಗಿ ಅನುದಾನಿತ ಕಾಲೇಜುಗಳು ಕ್ರೀಡಾ ಉಪನ್ಯಾಸಕರನ್ನು ನೇಮಿಸಿಕೊಂಡರೆ ಅವರಿಗೆ ಸರ್ಕಾರವೇ ಸಂಬಳ ಕೊಡುತ್ತದೆ. ಇದು ವಿಪರ್ಯಾಸ. ಜತೆಗೆ ಕನ್ನಡ, ಇಂಗ್ಲೀಷ್ ಬೋಧನೆ ಮಾಡುವ ಉಪನ್ಯಾಸಕರೇ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಉಪನ್ಯಾಸಕರ ಕೆಲಸದ ಒತ್ತಡ ಹೆಚ್ಚುತ್ತದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ಬಗ್ಗೆ ಸದನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆಯಬೇಕು ಎಂದರು.


ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಅವರು ತಮ್ಮ ತಂದೆ ಮಾಜಿ ಶಾಸಕ ದಿ.ಹಲಗೇಗೌಡರ ಹೆಸರಿನಲ್ಲಿ ವಾಣಿಜ್ಯ, ಕಲಾ ಹಾಗೂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟೆನಿಕಾಯ್ಟ ಪಂದ್ಯಾವಳಿಗೆ ಆಯ್ಕೆಯಾಗಿರುವ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಲಿಖಿತಾ ಅವರನ್ನು ಸನ್ಮಾನಿಸಿ ಸಹಾಯಧನ ನೀಡಿದರು.


ಕಾಲೇಜು ಪ್ರಾಂಶುಪಾಲ ಶಿವಮಾದೇಗೌಡ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಚಿಕ್ಕಾಡೆ ಪರಮೇಶ್, ಉಪನ್ಯಾಸಕರಾದ ರಾಮಕೃಷ್ಣೇಗೌಡ, ಸಿ.ಎಸ್.ಶಶಿಕಲಾ, ಮಹದೇವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net