

ಚಿಕ್ಕಮಗಳೂರು: ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ವಿನಯ್‌ಕುಮಾರ್ ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಮತ್ತು ವಂದೇ ಮಾತರಂ ಟ್ರಸ್ಟ್‌ನಿಂದ ಭುವನೇಂದ್ರ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದುರಾಭ್ಯಾಸಗಳಿಗೆ ದಾಸರಾಗದೆ ಸ್ವಾಸ್ಥ್ಯಜೀವನ ನಡೆಸುವ ಮೂಲಕ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಯುವಕರು ಮಾದಕ ವಸ್ತುಗಳ ಸೇವನೆ, ಮೊಬೈಲ್‌ನಂತಹ ವಸ್ತುಗಳಿಗೆ ಆಕರ್ಷಿತರಾಗಿ ಹೊರಬರಲಾಗದೆ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಸನಗಳಿಂದಾಗುವ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದಾಗ ಎಚ್ಚರಗೊಳ್ಳುತ್ತಾರೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಶೈಕ್ಷಣಿಕ ಸಾಧನೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಪಾಲಕರೂ ಮಕ್ಕಳ ಬಗ್ಗೆ ನಿಗಾವಹಿಸಿದಾಗ ಮಕ್ಕಳು ದಾರಿ ತಪ್ಪುವುದನ್ನು ತಪ್ಪಿಸಬಹುದು ಎಂದರು.
ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಮಾತನಾಡಿ, ಸಿದ್ಧಗಂಗಾ ಡಾ. ಮಹಾಂತ ಶಿವಯೋಗಿಗಳು ಮಾದಕ ಸೇವನೆ ಮಾಡುವವರ ಮನೆಗಳಿಗೆ ತೆರಳಿ ವ್ಯಸನಮುಕ್ತರನ್ನಾಗಿ ಮಾಡುವ ಕಾಯಕಯೋಗಿಯಾಗಿದ್ದರು ಎಂದು ಹೇಳಿದರು. ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ಸಮ ಸಮಾಜ ನಿರ್ಮಾಣದತ್ತ ಸಾಗಬೇಕು. ಪಾಲಕರು ಆಸೆಗಳನ್ನು ಹೊತ್ತು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅವರ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.