ಸಮಾಜ ಕಟ್ಟುವ ಕೆಲಸ ಮಾಡಲಿ

bkt-21-14 (1)
ಬಾಗಲಕೋಟೆಯಲ್ಲಿ ಎಸ್.ಆರ್.ಕೆ.ಸೌಹಾರ್ದ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಶನಿವಾರ ನವನಗರದಲ್ಲಿ ಉದ್ಘಾಟನೆಯಾಯಿತು. ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಶಾಸಕ ವಿಜಯಾನಂದ ಕಾಶಪ್ಪನವರ, ಸಂತೋಷ ಹೊಕ್ರಾಣಿ, ನಾಗರಾಜ್ ಹದ್ಲಿ, ಹನಮಂತ ರಾಕುಂಪಿ, ಅಂಬರೀಶ್ ನಾಗನೂರ, ಮಂಜುನಾಥ ಪುರ್ತಗೇರಿ ಸೇರಿ ಹಲವರು ಇದ್ದರು.
Published on

ಬಾಗಲಕೋಟೆ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರಿಗೆ ನಮ್ಮ ಸಮಾಜದ ಬಗ್ಗೆ ಗೌರವ, ಭಯ ಇಲ್ಲ. ನಾವೇ ಅವರನ್ನು ಕಂಡು ಭಯಪಡುವ ಸ್ಥಿತಿ ಇದೆ ಎಂದು ಹೇಳಿಕೆ ನೀಡಿದ್ದಕ್ಕೆ ಪಂಚಾಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಶ್ರೀಗಳ ವಿರುದ್ಧ ಕಿಡಿಕಿಡಿಕಾರಿದ್ದಾರೆ.

ಶನಿವಾರ ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಶಪ್ಪನವರ, ಮೊದಲು ಸ್ವಾಮೀಜಿ ಒಂದು ಪಕ್ಷದ ಪರವಾಗಿ ರಾಜಕಾರಣ ಮಾಡುವುದನ್ನು ಬಿಡಲಿ, ರಾಜಕಾರಣಿಗಳ ಬೆನ್ನು ಹತ್ತುವುದನ್ನು ಬಿಟ್ಟು ಸಮಾಜವನ್ನು ಕಟ್ಟಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಾನು. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಸ್ವಾಮೀಜಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅವರನ್ನು ಎಲ್ಲಿ ಹೆದರಿಸಿದ್ದಾರೆ? ಸಿಎಂ ಬಹಳ ಸ್ಪಷ್ಟವಾಗಿ ಹೇಳಿದ್ದು, ಪ್ರಕರಣ ಸವೋಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಅದು ತೆರವು ಆಗುವವರೆಗೂ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ. ಈಗ ಸರ್ಕಾರ ಏನಾದರೂ ನಿರ್ಧಾರ ತೆಗೆದುಕೊಂಡರೆ ಅದು ನ್ಯಾಯಾಂಗ ನಿಂಧನೆ ಆಗುತ್ತದೆ. ಸುಮ್ಮನೆ ಯತ್ನಾಳ ಮಾತು ಕೇಳಿಕೊಂಡು ಹೇಳಿದರೆ ಆಗದು. ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವನಿಗೆ ರಾಜ್ಯದಲ್ಲಿ ಮಾನ ಮರ್ಯಾದೆ ಇದೆಯಾ? ಸ್ವಲ್ಪ ದಿನ ತಡೆಯಿರಿ ಇವರ ಕಥೆ ಏನಾಗುತ್ತದೆ ಎಂದು ನೋಡಿವಿರಂತೆ ಎಂದರು.

ನಮ್ಮ ಸಮಾಜದ ಗುರುಗಳಿಗೆ ಗೌರವದಿಂದ ಹೇಳುತ್ತೇನೆ. ನೀವು ರಾಜಕಾರಣ ಮಾಡುವುದನ್ನು ಬಿಡಿ. ಈಗ ಹಿಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಗೌರವ ಕೊಡುತ್ತಿದ್ದರು ಎಂದಿದ್ದರಲ್ಲ. ೨ಡಿ, ೨ಸಿ ಏನಾದರೂ ನಮ್ಮ ಸಮುದಾಯಗಳಿಗೆ ಮೀಸಲಾತಿ ಕೊಡುತ್ತಿದೆಯಾ? ಕೇಳಿ ಆ ಸ್ವಾಮೀಜಿಗೆ? ಸುಮ್ಮನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತಪ್ಪು ಹೊರೆಸೋದು ಮಾಡಬಾರದು. ನಾವು ೨ಎ ಮೀಸಲಾತಿ ಕೇಳುತ್ತಿದ್ದೇವೆ. ಇವರ ತರಹ ೨ಸಿ ೨ಡಿಗೆ ನಾವು ಒಪ್ಪಿಲ್ಲ. ಹಿಂದೆ ಇದಕ್ಕೆ ಇದೇ ಸ್ವಾಮಿಗಳು ಆ ಯತ್ನಾಳ್ ಜೊತೆ ಸೇರಿಕೊಂಡು ಒಪ್ಪಿದ್ದರು. ನಾವು ಆವತ್ತೆ ಅದನ್ನು ಹರಿದು ಹಾಕಿದ್ದೇವು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ನಮಗೆ ಕೊಡುತ್ತೇವೆ ಎಂದಾಗಲೇ ನಾವು ಬೇಡ ಎಂದಿದ್ದೇವೆ. ಸ್ವಾಮೀಜಿಗಳು ಸಮಾಜಕ್ಕೆ ಮೀಸಲಾತಿ ಕೊಡೆಸುವುದನ್ನು ಬಿಟ್ಟು ಸಿಎಂ ಮೇಲೆ ಆರೋಪ ಮಾಡುವುದು. ಯಾರಿಗೋ ಬೆಂಬಲ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಸ್ವಾಮೀಜಿಗೆ ಹೇಳುತ್ತೇನೆ ಎಂದು ತಿಳಿಸಿದರು.

ಇಂದಿನಿಂದ ಬೆಳಗಾವಿಯಲ್ಲಿ ಮೀಸಲಾತಿಗಾಗಿ ಸ್ವಾಮೀಜಿ ಅವರು ವಕೀಲರ ಸಮಾವೇಶ ಮಾಡುತ್ತೇವೆ ಎಂದಿದ್ದಾರಲ್ಲ ಎನ್ನುವ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಕಾಶಪ್ಪನವರ, ರೀ… ನನಗೆ ಗೊತ್ತಿದೆ. ಹೋರಾಟದ ಮುಂಚೂಣಿಯಲ್ಲಿ ಇದ್ದಿದ್ದ ನಾನು. ಬೆಂಗಳೂರವರೆಗೂ ಪಾದಯಾತ್ರೆ ಮಾಡಿದ್ದು ನಾನು. ಆಗ ಯಾರಿದ್ರು? ನಮಗೆ ಎಲ್ಲ ಗೊತ್ತಿದೆ. ಸುಮ್ಮನೆ ಶಾಸಕರು ಬಂದಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ.

ಮೊದಲು ಸ್ವಾಮೀಜಿ ಅವರು ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದನ್ನು ಬಿಡಬೇಕು. ನಾವು ಯಾರೂ ಸಹ ಯತ್ನಾಳ್ ಅವರ ಗುಲಾಮರಲ್ಲ. ಯತ್ನಾಳ್ ಅವರ ಗುಲಾಮರಗಿರಿಗೆ ನಾವು ಯಾರೂ ಕೇಳಲ್ಲ. ನಮ್ಮದೇ ಸಂಘಟನೆ ಇದೆ. ನಾವು ಹೋರಾಟ ಮಾಡುತ್ತೇವೆ. ನಮಗೆ ಸಮಾಜ ಕಟ್ಟುವುದು, ಮೀಸಲಾತಿ ಕೊಡೆಸುವುದು ಗೊತ್ತಿದೆ ಎಂದ ಕಾಶಪ್ಪನವರ, ಪಂಚಮಸಾಲಿ ಸ್ವಾಮೀಜಿ ನಡೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net