

ಯಲ್ಲಾಪುರ: ತಾಲೂಕಿನ ಬಾಸಲ ಸಮೀಪದ ಕಾನೂರು ಜಲಪಾತದಲ್ಲಿ ಪ್ರವಾಸಿಗರಿಗೆ ಸುರಕ್ಷೆಯಿಲ್ಲದ ಕುರಿತು ಹಾಗೂ ಪ್ರವಾಸಿಗರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಕುರಿತು ‘ವಿಜಯವಾಣಿ’ ವರದಿಯ ಪರಿಣಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಜಲಪಾತಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಗ್ರಾಮ ಅರಣ್ಯ ಸಮಿತಿಯ ಪ್ರಮುಖರು ಹಾಗೂ ಗ್ರಾಮಸ್ಥರ ಸಭೆ ನಡೆಸಿದರು.
ಎಸಿಎಫ್ ಅಶೋಕ ಭಟ್ಟ ಹಾಗೂ ಆರ್ಎಫ್ಒ ಪ್ರಸಾದ ಪೆಡ್ನೆಕರ್ ಜಲಪಾತಕ್ಕೆ ಭೇಟಿ ನೀಡಿ, ಪ್ರವಾಸಿಗರ ಸುರಕ್ಷೆತೆಗೆ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಕುರಿತು ರ್ಚಚಿಸಿದರು. ನಂತರ ಗ್ರಾಮಸ್ಥರು ಹಾಗೂ ಅರಣ್ಯ ಸಮಿತಿಯ ಪ್ರಮುಖರ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಗ್ರಾಮಸ್ಥ ಗಣಪತಿ ವಾಗಳ್ಳಿ, ಪ್ರವಾಸಿಗರಿಂದ ಪರಿಸರ ಮಾಲಿನ್ಯ, ಕಿರಿಕಿರಿ ಉಂಟಾಗುತ್ತಿದ್ದು, ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನೇ ನಿರ್ಬಂಧಿಸುವಂತೆ ಆಗ್ರಹಿಸಿದರು. ಗ್ರಾಮಸ್ಥರು ಸಹ ಇದಕ್ಕೆ ದನಿಗೂಡಿಸಿದರು.
ಪ್ರತಿಕ್ರಿಯಿಸಿದ ಎಸಿಎಫ್ ಅಶೋಕ ಭಟ್ಟ, ಪ್ರವೇಶವನ್ನೇ ನಿರಾಕರಿಸುವುದಕ್ಕಿಂತ, ಪ್ರವಾಸಿಗರಿಂದ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಂಡು ಪ್ರವೇಶಕ್ಕೆ ಅನುಮತಿ ನೀಡುವುದು ಉತ್ತಮ ಎಂಬ ಸಲಹೆ ನೀಡಿದರು. ಜಲಪಾತದ ಬಳಿ ಜಾಗೃತಿ ಫಲಕಗಳ ಅಳವಡಿಕೆ ಮಾಡಿ ಸುರಕ್ಷೆತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಗಣಪತಿ ಗಾಂವ್ಕಾರ ಮಾತನಾಡಿ, ಪ್ರವಾಸಿಗರ ಪ್ರವೇಶಕ್ಕೆ ಶುಲ್ಕ ವಸೂಲಿ ಮಾಡಲಾಗುವುದು. ಜಲಪಾತ ಪ್ರವೇಶಿಸುವಲ್ಲಿ ಗೇಟ್ ನಿರ್ವಿುಸಿ, ಅಲ್ಲಿ ಒಬ್ಬ ಸಿಬ್ಬಂದಿ ನೇಮಿಸಲಾಗುವುದು. ಗೇಟ್ ಬಳಿ ಪ್ರವಾಸಿಗರನ್ನು ತಪಾಸಣೆ ನಡೆಸಿ, ಮದ್ಯಪಾನಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲಾಗುವುದೆಂದು ಭರವಸೆ ನೀಡಿದರು. ಗ್ರಾಮಸ್ಥರಾದ ಪ್ರಸನ್ನ ಗಾಂವ್ಕಾರ, ಶ್ರೀಪಾದ ಗಾಂವ್ಕಾರ, ಮಂಜುನಾಥ ಗಾಂವ್ಕಾರ, ವಿಶ್ವನಾಥ, ಅರಣ್ಯ ಇಲಾಖೆಯ ರಾಜೇಶ, ಗೌಡಪ್ಪ ಸುಳ್ಯದ ಇತರರು ಇದ್ದರು.