ಸಮಸ್ಯೆಗೆ ಸ್ಪಂದಿಸದಿದ್ದರೆ ಅಮಾನತಿಗೆ ಶಿಫಾರಸ್ಸು

22SIRSI1
Published on

ಶಿರಸಿ: ಮಳೆ ಹಾಗೂ ಪ್ರಕೃತಿ ವಿಕೋಪ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಅಮಾನತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಎಚ್ಚರಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಮಳೆಗಾಲ ಹಾಗೂ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹವಾಮಾನ ಇಲಾಖೆಯಿಂದ ಕಳೆದ ವರ್ಷದಂತೆ ಈ ಬಾರಿಯೂ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಹಾಗಾಗಿ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಆಯಾ ಇಲಾಖೆ ಅಧಿಕಾರಿಗಳೇ ಪರಿಹರಿಸಬೇಕು. ಉಪವಿಭಾಗೀಯ ಕಚೇರಿಗೆ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು. ಜನರು ದೂರವಾಣಿ ಮೂಲಕ ಸಮಸ್ಯೆ ಹೇಳಿದರೆ ಅದಕ್ಕೆ ಸ್ಪಂದಿಸಬೇಕು. ಜವಾಬ್ದಾರಿ ಹೊತ್ತ ಅಧಿಕಾರಿಗಳು ಅಸಹಾಯಕರಾಗಿ ಮಾತನಾಡಬಾರದು. ಹಾಗೆ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.

ಮಳೆಗಾಲ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆ ಬದಿ ಆಳ ಗುಂಡಿಗಳಿದ್ದರೆ ಮುಚ್ಚಬೇಕು. ಕಾಮಗಾರಿಗಳಿಗೆ ಸ್ಥಳೀಯ ಕಾರ್ವಿುಕರನ್ನೇ ಬಳಸಬೇಕು. ಹೊರ ರಾಜ್ಯದ ಕಾರ್ವಿುಕರನ್ನು ಬಳಸಿಕೊಂಡರೆ ಅಂತವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗುವುದು ಎಂದರು.

ಸದ್ಯ ಶಾಲೆಗಳು, ಅಂಗನವಾಡಿಗಳು, ವಿದ್ಯಾರ್ಥಿ ವಸತಿ ನಿಲಯಗಳು ಬಂದ್ ಇದ್ದು, ಯಾವುದೇ ದುರಸ್ತಿ ಕಾರ್ಯಗಳಿದ್ದರೆ ತಕ್ಷಣ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗೆ ಸೂಚಿಸಿದರು.

ಮಳೆಗಾಲದಲ್ಲಿ ಹೆಸ್ಕಾಂಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕಳೆದ ವರ್ಷ 1500 ಕಂಬ ಬಿದ್ದಿದ್ದವು. ಈ ಬಾರಿ ಈಗಾಗಲೆ 100ಕ್ಕೂ ಹೆಚ್ಚು ಕಂಬಗಳು ಬಿದ್ದಿವೆ. ಜನತೆಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದ ಅವರು, ಮಳೆಗಾಲದಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಕೋವಿಡ್-19 ಕಾರ್ಯಚಟುವಟಿಕೆ ಜತೆ ಈ ಕಾರ್ಯದತ್ತಲೂ ಗಮನ ಹರಿಸಬೇಕು ಎಂದರು. ಈ ವೇಳೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಇದ್ದರು.

ಗುಡ್ಡ ಕುಸಿಯದಂತೆ ಮುನ್ನೆಚ್ಚರಿಕೆ ವಹಿಸಿ: ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತದ ಘಟನೆ ಪುನರಾವರ್ತನೆ ಆಗುವ ಸಾಧ್ಯತೆಗಳಿವೆ. ಹಾಗಾಗಿ ಈಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿಯಂತೆ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಈಗಾಗಲೇ ಮಳೆಗಾಲ ಪೂರ್ವ ಕಾಮಗಾರಿ ನಡೆದಿದೆ. ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ನೀರು ನಿಲ್ಲುವ ಪ್ರದೇಶಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ.| ರಮೇಶ ನಾಯಕ ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net