ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ

15 rtl 01
Published on

ರಟ್ಟಿಹಳ್ಳಿ: ವಿದ್ಯಾರ್ಥಿಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಲವು ಸಮಸ್ಯೆಗಳು ಎದುರಾಗುವುದು ಸಹಜ. ಆದರೆ, ಇವುಗಳನ್ನು ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಎದುರಿಸಿದಾಗ ಯಶಸ್ಸು ಪಡೆಯಲು ಸಾಧ್ಯ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಂಗರಾಜ ವನದುರ್ಗ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದ ರಜತ ಮಹೋತ್ಸವ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸ ಕುಂದಬಾರದು. ಭೂಮಿಯ ಮೇಲಿನ ಎಲ್ಲ ಕಲ್ಲುಗಳು ಶಿಲೆಯಾಗಲು ಸಾಧ್ಯವಿಲ್ಲ. ಮಳೆಯ ಎಲ್ಲ ಹನಿಯು ಸಮುದ್ರ ಸೇರುವುದಿಲ್ಲ. ಹಾಗೆಯೇ ಶಿಕ್ಷಕರು ಕಲಿಸುವ ಪಾಠವನ್ನು ವಿದ್ಯಾರ್ಥಿಗಳು ಸಮಚಿತ್ತದಿಂದ ಕೇಳದಿದ್ದರೆ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿದಾಗ ಮುಂದಿನ ಜೀವನ ಸುಖಕರವಾಗಿರುತ್ತದೆ. ಶಿಕ್ಷಕರು ಸಹ ತರಗತಿಯಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು ಎಂದರು.

ಸುಮಾರು 25 ವರ್ಷಗಳಿಂದ ಈ ವಿದ್ಯಾಸಂಸ್ಥೆ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಸಾಲಿ ಅವರ ಪರಿಶ್ರಮ ಅಧಿಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ನೀಡುವಲ್ಲಿ ಶಿಕ್ಷಣ ಸಂಸ್ತೆಗಳ ಪಾತ್ರ ಮಹತ್ವದ್ದಾಗಿದೆ. ಇಂದಿನ ಪೈಪೋಟಿ ದಿನಮಾನಗಳಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಬೆಳ್ಳಿ ಮಹೋತ್ಸವದ ಕಟ್ಟಡದ ಶಂಕುಸ್ಥಾಪನೆ ನೇರವೇರಿಸಿದರು. ವಿವಿಧ ಖಾಸಗಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಯು.ಎಂ. ಸಾಲಿ, ಸದಸ್ಯರಾದ ಅಶೋಕ ಹೆಡಿಯಾಲ, ತಿಮ್ಮಣ್ಣ ಹಾದ್ರಿಹಳ್ಳಿ, ಹನುಮಂತಪ್ಪ ಹರಗನಹಳ್ಳಿ, ಮಂಜುನಾಥ ತಳವಾರ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾ.ಪಂ. ಸದಸ್ಯರಾದ ಹೇಮಣ್ಣ ಮುದರೆಡ್ಡಿ, ಭರಮಪ್ಪ ಎಲ್ವಹದಳ್ಳಿ, ಆರ್.ಎನ್. ಗಂಗೋಳ, ಹುಸೇನಸಾಬ ಶರೀಫ, ಎ.ಸಿ. ಮಕಂದರ, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಕಮತಹಳ್ಳಿ, ಗೋಪಾಲ ಮಡಿವಾಳರ, ಪ್ರಾಚಾರ್ಯ ಎ.ಜಿ. ರಾಘವೇಂದ್ರ, ದೇವರಾಜ ನಾಗಣ್ಣನವರ ಇತರರು ಇದ್ದರು. ಉಪನ್ಯಾಸಕರಾದ ಸಿ.ಎಸ್. ಕಮ್ಮಾರ, ಬಿ.ಸಿ. ತಿಮ್ಮೇನಹಳ್ಳಿ, ಎಚ್.ಎಚ್. ಬ್ಯಾಡಗೌಡ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net