ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ 31ರವರೆಗೆ ಗಡುವು

16 oct tnp 01
Published on

ತಿ.ನರಸೀಪುರ: ತಾಲೂಕಿನ ಕೇತುಪುರ ಪರಿಶಿಷ್ಟ ಜಾತಿಯವರಿಗೆ ಕಾಯ್ದಿರಿಸಿದ್ದ ಆಶ್ರಯ ನಿವೇಶನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು, ಬೇವಿನಹಳ್ಳಿ ಗ್ರಾಮದಲ್ಲಿ ಸಿಎಂ, ಸಚಿವರೇ ಹಂಚಿಕೆ ಮಾಡಿದ್ದ ನಿವೇಶನಗಳಿಗೆ ಇ-ಸ್ವತ್ತು ನೀಡಲು, ದಲಿತರ ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸುಜ್ಜಲೂರು ದಲಿತರ ಕಾಲನಿಯಲ್ಲಿ ಚರಂಡಿ ಸಮಸ್ಯೆ ಪರಿಹರಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಆ.31ರವರೆಗೆ ಗಡುವು ನೀಡುವುದಾಗಿ ದಲಿತ ಸಂಘರ್ಷ ಸಮಿತಿ ಬಣ ರಹಿತ ಸಂಘಟನೆಯ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ ತಿಳಿಸಿದರು.

ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಬುಧವಾರ ಹೋರಾಟದ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಕೆಗೆ ಆಡಳಿತ ವರ್ಗ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಖಂಡಿಸಿ ನ.1ರಿಂದ ತಾಲೂಕು ಕಚೇರಿ ಆವರಣದಲ್ಲಿ ಅನ್ಯಾಯಕ್ಕೊಳಗಾದ ಗ್ರಾಮಸ್ಥರ ಜತೆಗೂಡಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದರು.

ತಾಲೂಕಿನ ಕೇತುಪುರ ಗ್ರಾಮದಲ್ಲಿ 1972ರಲ್ಲಿ ಅಂದಿನ ಜಿಲ್ಲಾಧಿಕಾರಿ ಜೆ.ಭಾಸ್ಕರ್ ಅವರು ಪರಿಶಿಷ್ಟರಿಗೆ ಮಂಜೂರು ಮಾಡಿ ಮೀಸಲಿಟ್ಟಿದ್ದ 2.27 ಎಕರೆ ನಿವೇಶನವನ್ನು ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ. ಬಲಾಢ್ಯ ಜಾತಿಯವರ ಪ್ರಾಬಲ್ಯದಿಂದ ಬೇವಿನಹಳ್ಳಿ ಗ್ರಾಮದಲ್ಲಿ ಕಳೆದ 2014ರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರೇ ದಲಿತರಿಗೆ ಹಂಚಿಕೆ ಮಾಡಲಾಗಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ನೀಡಿದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಇ ಸೊತ್ತು ಮಾಡಿಕೊಡಲು ಮೀನಮೇಷ ಎಣಿಸುತ್ತಿದೆ. ಹಕ್ಕುಪತ್ರದ ಸಂಬಂಧ ಪಿಡಿ ಮತ್ತು ತಹಸೀಲ್ದಾರ್ ಪರಸ್ಪರ ಸಬೂಬು ಹೇಳುವ ಪತ್ರ ವ್ಯವಹಾರ ಮಾಡಿಕೊಂಡು ದಲಿತರು ಪರಿತಪಿಸುವಂತೆ ಮಾಡಿದ್ದಾರೆ ಎಂದು ದೂರಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪರಿಶಿಷ್ಟ ಜಾತಿ ಸ್ಮಶಾನಗಳ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಆದರೆ ವಾಸ್ತವವಾಗಿ ತಾಲೂಕಿನಲ್ಲಿ ದಲಿತ ಸಮುದಾಯಗಳಿಗೆ ಸ್ಮಶಾನಗಳನ್ನು ಸರಿಯಾಗಿ ಕಲ್ಪಿಸಿಲ್ಲ. ಇರುವಂತಹ ರುದ್ರಭೂಮಿಗಳ ಬಗ್ಗೆ ಆರ್‌ಟಿಸಿಯಲ್ಲಿ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ನಮೂದಿಸಿಲ್ಲ. ದಲಿತರ ಸ್ಮಶಾನಗಳು ಸಾರ್ವಜನಿಕ ರುದ್ರಭೂಮಿಗಳೆಂದು ಭೂ ದಾಖಲೆಯಲ್ಲಿ ನಮೂದಾಗಿದ್ದರೆ ಸರ್ಕಾರ ಮಂಜೂರು ಮಾಡಿದ್ದ ಅಭಿವೃದ್ಧಿ ಅನುದಾನ ಬಳಕೆಯಾಗದೆ ವ್ಯರ್ಥವಾಗಲಿದೆ. ಹಾಗಾಗಿ ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಮುದಾಯಗಳ ರುದ್ರಭೂಮಿಗಳನ್ನು ಪರಿಶಿಷ್ಟ ಜಾತಿಯ ಸ್ಮಶಾನಗಳನ್ನು ದಾಖಲೆಗಳನ್ನು ಸರಿಪಡಿಸಬೇಕು ಎಂದರು.

ವಾಟಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜ್ಜಲೂರು ಗ್ರಾಮದಲ್ಲಿ ಚರಂಡಿ ತ್ಯಾಜ್ಯ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದೆ ಮಡುಗಟ್ಟಿ ನಿಲ್ಲುತ್ತಿದ್ದು, ಚರಂಡಿ ಕೊನೆಗೊಳ್ಳುವ ದಲಿತರ ಕಾಲನಿಯಲ್ಲಿ ಗಬ್ಬೆದ್ದು ನಾರುತ್ತಿದೆ. ಚರಂಡಿ ನೀರು ಹರಿದು ಹೋಗಲು ಸಂಪರ್ಕ ಚರಂಡಿ ಇಲ್ಲವೇ ಕಾಮಗಾರಿಯನ್ನ ಕೈಗೊಂಡ ಅಧಿಕಾರಿ ಕಾಮಗಾರಿಯಲ್ಲಿ ಭ್ರಷ್ಟಾಚಾರವನ್ನು ನಡೆಸಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಕೇತುಪುರ ಹಾಗೂ ಬೇವಿನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿಯವರ ನಿವೇಶನ ಹಂಚಿಕೆ ಸಮಸ್ಯೆಯ ಬಗ್ಗೆ ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇವೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರದಿಂದ ದಲಿತರ ಪರಿಹರಿಸುವಂತೆ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನವೆಂಬರ್ ಒಂದರಂದು ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ಕೂರುತ್ತೇವೆ ಎಂದರು.

ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಬಣರಹಿತ ಜಿಲ್ಲಾ ಸಂಘಟನಾ ಸಂಚಾಲಕರಾದ ಅಲತ್ತೂರು ಶಿವರಾಜ್, ಅಶೋಕ್ ಕೆ.ಎಂ.ವಾಡಿ, ತಾಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ತಾಲೂಕು ಸಂಘಟನಾ ಸಂಚಾಲಕರಾದ ಕೇತುಪುರ ರವೀಂದ್ರ, ಶಿವನಂಜು, ಗೌರಮ್ಮ, ಶಶಿಕಲಾ, ಚಂದ್ರಕಲಾ, ಬೇವಿನಳ್ಳಿ ಲತಾ, ಹೇಮಾ, ಸುಜ್ಜಲೂರು ಸಿದ್ದರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net