ಸಮಸ್ಯೆಗಳ ಗಮನಸೆಳೆದ ಮೂಗೂರು ಗ್ರಾಮಸ್ಥರು

Gramasabhe
Published on

ಮೂಗೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ.ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕಚೇರಿ ಆವರಣದಲ್ಲಿ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತು.

ರೇಷ್ಮೆ , ಆರೋಗ್ಯ, ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿದ್ದು, ನೆರೆದಿದ್ದ ರೈತರು ಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳು, ಗಿಡಗಂಟಿಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಂದು 6 ದಿನಗಳಾದರೂ ಕೊನೆಯ ಭಾಗದ ರೈತರ ಜಮೀನುಗಳಿಗೆ ಇನ್ನೂ ನೀರು ತಲುಪಿಲ್ಲ ಎಂದು ರೈತರು ದೂರಿದರು. ನೀರಿನ ಸಮಸ್ಯೆ ಬಾರದಂತೆ ನಿಗಾವಹಿಸುವಂತೆ ನೀರಾವರಿ ಎಇಇ ಸುರೇಂದ್ರ ಅವರಿಗೆ ರೈತರು ಆಗ್ರಹಿಸಿದರು.

ಜಲಜೀವನ (ಜೆಜೆಎಂ) ಮನೆ ಮನೆಗೆ ಗಂಗೆ ಯೋಜನೆಯಡಿಯಲ್ಲಿನ ಕಾಮಗಾರಿಯನ್ನು ಅಸಂಬದ್ಧವಾಗಿ ನಿರ್ವಹಣೆ ಮಾಡಿ, ಹಳ್ಳ ಗುಂಡಿಗಳ ನಡುವೆ ಬೀದಿಗಳಲ್ಲಿ ಸಂಚಾರಕ್ಕೆ ತೊಡಕಾಗಿದೆ ಎಂದು ಸ್ಥಳೀಯರು ದೂರಿದರು.

ಮೂಗೂರು ಆಸ್ಪತ್ರೆಯ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ ಮಾತನಾಡಿ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು ಕರ್ತವ್ಯ ನಿರತರಾಗಿದ್ದು, ಅಂಧತ್ವ ನಿವಾರಣಾ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕಗಳನ್ನು ನೀಡಲಾಗಿದೆ, ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಮದಲ್ಲಿ ಕೋತಿ, ಬೀದಿ ನಾಯಿಗಳ ಕಾಟ ಜಾಸ್ತಿಯಾಗಿ ಜನ ಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಅವುಗಳ ಉಪಟಳವನ್ನು ನಿಯಂತ್ರಿಸಿ ಎಂದು ನಿವಾಸಿಗಳು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮದಲ್ಲಿ ಮಾಂಸದಂಗಡಿಗಳ ತ್ಯಾಜ್ಯ ತಿನ್ನುವುದರಿಂದ ನಾಯಿಗಳ ಕಾಟ ಜಾಸ್ತಿಯಾಗಿದ್ದು, ಬೀದಿನಾಯಿ ಕಚ್ಚಿ ವ್ಯಕ್ತಿ ಸತ್ತರೆ ಮಾಂಸದಂಗಡಿ ಮಾಲೀಕರು ಕ್ರಿಮಿನಲ್ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪಿಡಿಒ ಅಮ್ಜದ್ ಪಾಷ ಎಚ್ಚರಿಸಿದರು.

ಗ್ರಾಮದಲ್ಲಿ ಕುಡಿಯುವ ನೀರು, ಬೀದಿದೀಪ, ಚರಂಡಿಯ ಸ್ವಚ್ಛತೆಗೆ ಗಮನ ವಹಿಸಿ ಎಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಉಪಾಧ್ಯಕ್ಷೆ ಭಾಗ್ಯಾ, ಮಾಜಿ ಸದಸ್ಯ ಮಾದೇಶ್, ಕೃಷ್ಣಸ್ವಾಮಿ, ಗ್ರಾಪಂ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net