

ಕಲಬುರಗಿ: ಜಿಲ್ಲಾದ್ಯಂತ ವಿವಿಧ ಹಳ್ಳಿಗಳಿಂದ ನಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳ ಸಮಯಕ್ಕೆ ಬಸ್‌ಗಳ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒನಿಂದ ನಗರದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ದೂರದ ಹಳ್ಳಿ, ಪಟ್ಟಣದಿಂದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುತ್ತಾರೆ. ಆದರೆ ಜಿಲ್ಲಾದ್ಯಂತ ಹಲವು ಹಳ್ಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದೆ ತರಗತಿಗೆ ಹಾಜರಾಗಲು ಆಗುತ್ತಿಲ್ಲ. ಬರುವ ಕೆಲ ಬಸ್‌ಗಳು ಭರ್ತಿ ಆಗಿರುತ್ತವೆ. ನಿತ್ಯ ವಿದ್ಯಾರ್ಥಿಗಳು ಜೀವ ಭಯದಲ್ಲಿ ಪ್ರಯಾಣಿಸುವಂತಾಗಿದೆ ಎಂದು ಹೇಳಿದರು.
ಹೊಸಳ್ಳಿ, ಹೊಲ್ಲೂರು, ಕೋಗನೂರು, ಕೊಂಚೂರು, ಇಂಗನಕಲ್, ಹರಕಂಚಿ, ಫಿರೋಜಾಬಾದ್, ಅಪ್ಪಚಂದ್, ಗೌಡಗಾಂವ, ಕಡಬೂರ, ಇವಣಿ, ಹಿಪ್ಪರಗಾ ರಾಮನಗುಡ, ಭೀಮಳ್ಳಿ , ವಾಡಿ, ಸ್ಟೇಷನ್ ಗಣಗಾಪುರ, ಸಿಂದಗಿ ಬಿ, ಬಂಗರಗಾ, ದಂಗಾಪುರ, ಕಣಮುಸ್, ಕಲಗುರ್ತಿ, ಜವಳಿ, ಸಾವಳಗಿ, ನಂದೂರ್ ಕೆ, ಮುಗುಟಾ, ತಿಳಗೊಳ ಸೇರಿ ಹಲವು ಗ್ರಾಮಗಳಿಗೆ ಬಸ್ ವ್ಯವಸ್ಥೆ, ಸಮಯಕ್ಕೆ ಬಸ್ ಮತ್ತು ವಿವಿಧೆಡೆ ಬಸ್ ನಿಲುಗಡೆ ಆಗಬೇಕು ಎಂದು ಆಗ್ರಹಿಸಿದರು.
ಬೆಳಗ್ಗೆ ೮ ರಿಂದ ೧೦ ಗಂಟೆಯವರೆಗೆ, ಮಧ್ಯಾಹ್ನ ೨.೩೦ರಿಂದ ೪ಗಂಟೆವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಮಾರ್ಕೆಟ್‌ಗೆ ಹೊರಡುವ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಸಾರಿಗೆ ವಿಭಾಗೀಯ ಕೇಂದ್ರ ಕಚೇರಿ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ನಾಗರಾಜ ರಾವೂರ, ಪ್ರಮುಖರಾದ ಸಿದ್ದಾರ್ಥ ತಿಪ್ಪನೋರ, ಯುವರಾಜ ರಾಠೋಡ, ಬಾಬು, ಅಜಯ್, ಸ್ಫೂರ್ತಿ, ರಮೇಶ, ತುಳಜರಾಮ ಎನ್.ಕೆ. ಇತರರಿದ್ದರು.