ಸಮರೋಪಾದಿಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆಯಲಿ

24-KGL-2
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 35;
Published on

ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕನಸು ಕಂಡಿದ್ದೇನೆ, ಅದರಲ್ಲೊಂದಾದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜ್‌ಕುಮಾರ್ ರಸ್ತೆ ವಿಸ್ತರಣೆ. ಈ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಯಬೇಕೆಂದು ಅಧಿಕಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ತಾಕೀತು ಮಾಡಿದರು.

ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜ್‌ಕುಮಾರ್ ರಸ್ತೆ ವಿಸ್ತರಣೆ ವಿಚಾರ ಸಂಬಂಧ ಮಾತನಾಡಿದರು.

ಸದನದಲ್ಲಿ ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವು ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ರಸ್ತೆ ವಿಸ್ತರಣೆಯೂ ಒಂದಾಗಿದೆ. ಪಿಡಬ್ಲುೃಡಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ರಸ್ತೆ ವಿಸ್ತರೆಣೆಗೆ ಅನುದಾನ ಕೇಳಿದ್ದೇನೆ. ಅವರು ಭರವಸೆ ನೀಡಿದ್ದಾರೆ. ಹಾಗಾಗಿ ನಗರಸಭೆ ಹಾಗೂ ಪಿಡಬ್ಲುೃಡಿ ಅಧಿಕಾರಿ ಜರೂರಾಗಿ ರಸ್ತೆ ಒತ್ತುವರಿ ವರದಿಯನ್ನು ಸಲ್ಲಿಸಬೇಕು ಎಂದರು. ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಲಕ್ಷ್ಮೀಶ್ ಈ 2 ರಸ್ತೆಯ ನಕ್ಷೆಯನ್ನು ಶಾಸಕರಿಗೆ ನೀಡಿ ಮಾಹಿತಿ ನೀಡಿದರು.

ನಗರಸಭೆ ಸದಸ್ಯ ಶಾಂತರಾಜು ಮಾತನಾಡಿ, ಹಿಂದೆಯೂ 80 ಅಡಿ ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದನ್ನು ಬಳಸಿಕೊಂಡರೆ ಕೆಲಸ ಸಲೀಸಾಗುತ್ತದೆ ಎಂದರು.

ಸದಸ್ಯ ಪ್ರಶಾಂತ್ ಮಾತನಾಡಿ, 100 ಅಡಿ ರಸ್ತೆ ಮಾಡುವಂತೆ ಸಲಹೆ ನೀಡಿದರು. ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ಟೋಟಲ್ ಸ್ಟೇಷನ್ ಸರ್ವೇ ಆಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪಿಡಬ್ಲುೃಡಿ ಹಾಗೂ ನಗರಸಭೆ ತ್ವರಿತವಾಗಿ ರಸ್ತೆ ವಿಸ್ತರಣೆಗೆ ಅಗತ್ಯವಾದ ಒತ್ತುವರಿ ಪಟ್ಟಿಯನ್ನು ಸಲ್ಲಿಸಬೇಕೆಂದರು.

ನಗರಸಭೆ ನಾಮ ನಿರ್ದೇಶನ ಸದಸ್ಯ ನರಸಿಂಹನ್ ಮಾತನಾಡಿ, ಇನ್ನು 3 ವರ್ಷದ ಅವಧಿಯಲ್ಲಿ ರಸ್ತೆ ವಿಸ್ತರಣೆ ಮಾಡಿ ಸರ್ ಒಳ್ಳೆಯ ಹೆಸರು ಬರಲಿದೆ ಎಂದು ಸಲಹೆ ನೀಡಿದರು.

ನನ್ನನ್ನು ಬರೀ 3 ವರ್ಷದ ಅವಧಿಗೆ ಶಾಸಕ ಅನ್ನಬೇಡಿ, ಬರೀ ಮೂರು ವರುಷ ಸಾಕಾ ಎಂದು ಸಭೆಯಲ್ಲಿ ಶಾಸಕರು ಪ್ರಶ್ನಿಸುವ ಮೂಲಕ ಸಭೆ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಎಇಇ ಸುರೇಶ್‌ಗೆ ತರಾಟೆ:

ಸಾಮಾನ್ಯ ಸಭೆ ಆಜೆಂಡಾವನ್ನು ಶಾಸಕರಿಗೆ ತಲುಪಿಸದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಎ.ರಮೇಶ್ ಮೇಲೆ ಶಾಸಕರು ಅಸಮಾಧಾನ ಹೊರಹಾಕಿದರು. ಬಳಿಕ ಇಂಜಿನಿಯರ್ ಸುರೇಶ್ ಅವರ ಜವಾಬ್ದಾರಿ ಕುರಿತು ಸಭೆಯಲ್ಲಿ ಪ್ರಶ್ನಿಸುತ್ತಿದ್ದ ಶಾಸಕರು ನಿಮಗೆ ಇಲ್ಲಿ ಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಮಾಡಿ, ಇಲ್ಲದಿದ್ದರೆ ನನಗೆ ಇಲ್ಲಿ ಕೆಲಸ ಮಾಡಲು ಆಗಲ್ಲ ಎಂದು ಪತ್ರ ನೀಡಿ ಹೊರಟು ಹೋಗಿ ಎಂದು ತರಾಟೆಗೆ ತೆಗೆದುಕೊಂಡರು. ನೌಕರ ರಾಘವೇಂದ್ರ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ನಗರಸಭೆ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಆಯುಕ್ತರ ಜತೆ ಸೇರಿ ಬಗೆಹರಿಸುವಂತೆ ಸಲಹೆ ನೀಡಿದರು.

ಕೊಳ್ಳೇಗಾಲ ಸುತ್ತಲೂ ಬೈಪಾಸ್ ಆಗಿದೆ. ಇದ್ದರಿಂದ ಪಟ್ಟಣದಲ್ಲಿ ನಡೆಯುವ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುತ್ತದೆ. ಹಾಗಾಗಿ ಪಟ್ಟಣ ಅಭಿವೃದ್ಧಿ ಜರೂರಾಗಿ ಕೆಲಸಗಳು ಆಗಬೇಕಿದೆ ಎಂದರು.

ಬಿ-ಖಾತೆೆ ಹೆಲ್ಪ್ ಡೆಸ್ಕ್ ತೆರೆಯಿರಿ: ಬಿ-ಖಾತೆ ವಿತರಣೆಗೆ ಕಂದಾಯ ಪಾವತಿಸುವ ಬಗೆಗಿನ ಗೊಂದಲ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ನಗರಸಭೆ ಸದಸ್ಯೆರೊಬ್ಬರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೆಲವು ಸದಸ್ಯರು ಅಸಮಾಧಾನ ಹೊರ ಹಾಕಿದರು. ಸದಸ್ಯ ಧರಣೇಶ್ ಅಧಿಕಾರಿಗಳಿಂದ ಗೊಂದಲ ಉಂಟಾಗಿದೆ ಎಂದರು.

ಈ ವೇಳೆ ಕಂದಾಯ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, 2023-24ನೇ ಸಾಲಿನ ಹಿಂದಿನ 6 ವರ್ಷಕ್ಕೆ ಡಬಲ್ ಟ್ಯಾಕ್ಸ್ ಹಾಗೂ ಪ್ರಸಕ್ತ 1 ವರ್ಷಕ್ಕೆ ಸಿಂಗಲ್ ಟ್ಯಾಕ್ಸ್ ಕಟ್ಟಬೇಕೆಂದರು. ಶಾಸಕರು ಪ್ರತಿಕ್ರಿಯಿಸಿ, ಸರ್ಕಾರ ಸುತ್ತೋಲೆಯಂತೆ ಕಾರ್ಯ ನಿರ್ವಹಿಸಿ, ಸಾರ್ವಜನಿಕರಿಗೆ ಹೆಲ್ಪ್ ಡೆಸ್ಕ್ ತೆರೆದು ಮಾಹಿತಿ ನೀಡಿ ಎಂದು ಕಂದಾಯ ಅಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ, ಈ ಬಗ್ಗೆ ಸರ್ಕಾರ ಮುಂದೆ ಏನು ಕ್ರಮ ವಹಿಸಲಿದೆ ಎಂಬುದನ್ನು ನೋಡೋಣ ಎಂದರು. ಸಭೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪವಾವಾದವು. ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net