

ಬಾಗಲಕೋಟೆ: ಮದುವೆಯಾಗಲು ಸಬ್ ರಜಿಸ್ಟರ್ ಕಚೇರಿಗೆ ಆಗಮಿಸಿದ್ದ ಪ್ರೇಮಿಗಳ ಮೇಲೆ ಯುವತಿ ಕಡೆಯುವರು ದಾಳಿ ನಡೆಸಿದ್ದು, ಯುವತಿಯನ್ನು ಥಳಿಸಿರುವ ಘಟನೆ ಶುಕ್ರವಾರ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಯುವತಿಗೆ ಆಕೆಯ ಪೋಷಕರು ರಕ್ತ ಸೋರುವಂತೆ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಆಕೆಗೆ ನೀರು ಕುಡಿಸಿ ಎಳೆದುಕೊಂಡು ಹೋಗಿದ್ದಾರೆ. ಸದ್ಯ ಯುವತಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಸ್ಥಳದಲ್ಲಿದ್ದ ತಹಸೀಲ್ದಾರ ಎದುರೇ ಪೋಷಕರು ಯುವತಿ ಮೇಲೆ ಕೈಮಾಡಿದ್ದಾರೆ. ಜಮಖಂಡಿ ಉಳ್ಳಾಗಡ್ಡಿ ಏರಿಯಾದ ಯುವತಿ ಬೇರೊಂದು ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರದ್ದು ಬೇರೆ ಬೇರೆ ಜಾತಿ ಆಗಿದ್ದರಿಂದ ಯುವತಿ ಮನೆಯವರು ಇದಕ್ಕೆ ಒಪ್ಪಿರಲಿಲ್ಲ.
ಶುಕ್ರವಾರ ಬೆಳಗ್ಗೆ ಜಮಖಂಡಿ ಸಬ್ ರಜಿಸ್ಟರ್ ಕಚೇರಿಯಲ್ಲಿ ವಿವಾಹ ಮಾಡಿಕೊಳ್ಳಲು ಪ್ರೇಮಿಗಳು ಬಂದಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಯುವತಿ ಕಡೆಯವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಪ್ರಿಯಕರ ಜಮಖಂಡಿ ಪೊಲೀಸರ ಮೊರೆ ಹೋಗಿದ್ದಾನೆ.