

ಸಕಲೇಶಪುರ: ಭಾರತೀಯ ಸನಾತನ ಯೋಗ ಪದ್ಧತಿಯು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಯೋಗ ಚೇತನ ಟ್ರಸ್ಟ್‌ನಿಂದ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸನಾತನ ಪರಂಪರೆಯು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಇತ್ತೀಚೆಗೆ ವಿದೇಶಗಳಲ್ಲೂ ಭಾರತೀಯ ಸಂಸ್ಕಾರ, ಸಂಸ್ಕೃತಿ ಪಾಲಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ನಮ್ಮ ಧರ್ಮದ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾಗಿದೆ. ಆರೋಗ್ಯಕ್ಕಾಗಿ ಪ್ರತಿದಿನ ಯೋಗಾಭ್ಯಾಸ ಅನಿವಾರ್ಯವಾಗಿದೆ. ನಮ್ಮ ದೇಶದ ಯೋಗ ಪದ್ಧತಿಯನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದರು.
ಕೆಲಸದ ಒತ್ತಡ ಹೆಚ್ಚಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಯೋಗ ಅಭ್ಯಾಸ ಮಾಡಬೇಕು. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಪ್ರತಿದಿನ ಯೋಗಾಭ್ಯಾಸಕ್ಕಾಗಿ ಶಾಶ್ವತ ಸ್ಥಳ ಗುರುತಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಯೋಗ ಚೇತನ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀ ರಂಗನಾಥ್ ಮಾತನಾಡಿ, 20 ವರ್ಷಗಳಿಂದ ಟ್ರಸ್ಟ್‌ನಿಂದ ಎಲ್ಲರಿಗೂ ಉಚಿತವಾಗಿ ಯೋಗಾಭ್ಯಾಸ ಕಲಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸೈನಿಕ ಕೆ.ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಕೃಷ್ಣಪ್ಪ, ಯೋಗ ಚೇತನ ಟ್ರಸ್ಟ್‌ನ ಜಗದೀಶ್, ಲಕ್ಷ್ಮಣ ಕೀರ್ತಿ, ಬಸವರಾಜು, ಗೀತಾ ಉಪಸ್ಥಿತರಿದ್ದರು.