

ಬಾಗಲಕೋಟೆ: ಭಾರತ ಶರಣ ಸಂತ ಮತ್ತು ಸಹಜೀವಿಗಳ ದೇಶ. ಇದುವೇ ಭಾರತದ ಅಂತಃಶಕ್ತಿ ಕೂಡಾ. ಸಹೋದರತ್ವ, ಸಹಕಾರ, ಸಂಸ್ಕಾರದಂತಹ ಸಂಸ್ಕೃತಿಯ ಅಗಾಧ ಪರಂಪರೆಯ ಸದ್ಭಾವನೆ ಹೊಂದಿದ ಪರಿಣಾಮ ಭಾರತಕ್ಕೆ ತನ್ನದೇ ಆದ ಘನತೆ ಹೊಂದಿದೆ ಎಂದು ಪ್ರಾಧ್ಯಾಪಕ ಡಾ.ಎಂ.ಸತ್ಯನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಐಕ್ಯುಎಸಿ ಪ್ರಾಯೋಜನೆ, ಎನ್‌ಎಸ್‌ಎಸ್ ಘಟಕ-೧ ೨ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಜಾಗತಿಕವಾಗಿ ಅನೇಕ ದೇಶಗಳು ಹಿಂದೆ ಶ್ರೀಮಂತವಾಗಿದ್ದವು ಆಗ ಭಾರತೀಯತೆಗೆ ಬಡತನವಿತ್ತು. ಆದರೆ ಇಂದು ಕಾಲ ಬದಲಾಗಿದೆ ಅನೇಕ ದೇಶಗಳು ಬಡತನದ ಕೂಪದಲ್ಲಿ ಬಿದ್ದು ಹೊರಳಾಡುತ್ತಿವೆ. ಆದರೆ ಭಾರತ ಪ್ರಗತಿ ಪಥದಲ್ಲಿದೆ. ಈ ಪ್ರಗತಿಗೆ ಈ ದೇಶದಲ್ಲಿ ಕಾಲಾಂತರದಲ್ಲಿ ಆಗಿ ಹೋದ ಋಷಿಮುನಿಗಳು, ಯೋಗಿ ವರೇಣ್ಯರು, ಸಿದ್ಧಿಪುರುಷರು ಹಾಗೂ ತ್ಯಾಗ ಮೂರ್ತಿಗಳ ಫಲವಾಗಿ ಭಾರತ ತನ್ನತನದ ಉತ್ತುಂಗದಲ್ಲಿ ಮುನ್ನಡೆದಿದೆ ಎಂದರು.
ಸುಭಾಷ್ ತಿಪ್ಪನ್ನವರ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಈ ದಿನಾಚರಣೆಯ ಸ್ಪೂರ್ತಿಯಾದ ಹಾಕಿಮಾಂತ್ರಿಕ ಧ್ಯಾನಚಂದ್ ಅವರ ಅವಿರತ ಪರಿಶ್ರಮ, ಕ್ರೀಡಾಸಕ್ತಿ ಮತ್ತು ಕ್ರೀಡೆಯ ಮೂಲಕ ದೇಶದ ಗುಣಾತ್ಮಕ ಚೈತನ್ಯಶಕ್ತಿ ವೃದ್ಧಿಸಬಹುದಾದ ವಿಚಾರಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ ಮಾತನಾಡಿ, ಇಂದು ಜರುಗಿದ ಎರಡೂ ಕಾರ್ಯಕ್ರಮಗಳು ಸ್ವರೂಪದಲ್ಲಿ ಬೇರೆ ಬೇರೆಯಾದರು ಆಂತರ್ಯದಲ್ಲಿ ಭವ್ಯ ಭಾರತದ ಅಂತಃಶಕ್ತಿ ವೃದ್ಧಿಗೆ ಪರಸ್ಪರ ಪೂರಕವಾಗಿವೆ. ಮೇಜರ್ ಧ್ಯಾನ್‌ಚಂದ್ ಭಾರತದ ಕ್ರೀಡೆಗೆ ಪ್ರೇರಕಶಕ್ತಿಯಾದರೆ ಮಾಜಿ ಸದ್ಭಾವನಾ ದಿನಾಚರಣೆ ಎಂಬುದು ಭಾವೈಕ್ಯ ಮನಸ್ಥಿತಿಯಿಂದ ದೇಶದ ತಳಹದಿ ಭದ್ರವಾಗಿ ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಐಕ್ಯೂಎಸಿ ಘಟಕದ ಸಂಯೋಜಕ ಡಾ.ಡಿ.ಎಸ್.ಲಮಾಣಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಎನ್.ಎಚ್. ಬೇವಿನಹಳ್ಳಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಆರ್.ಎಲ್.ಕಾತಕರಿ ಇದ್ದರು.