

ಮಾಂಜರಿ: ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಮತ್ತು ಸಂಶೋಧನೆ ಆಗಿದ್ದರೂ ಗ್ರಾಮೀಣ ಜನ ರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸುಕ್ಷೇತ್ರ ಯಡೂರು ಗ್ರಾಮದಲ್ಲಿರುವ ಶ್ರೀವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಮತ್ತು ಮಹಾ ರಥೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಾಗೂ ಸ್ವಯಂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವ್ಯಸನ ಮುಕ್ತ ಹಾಗೂ ಸದೃಢ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದರು.
ನಾಗನಸೂರ ಬೃಹನ್ಮಠದ ಪರಮಪೂಜ್ಯ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಜನರು ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೊಲ್ಲಾಪುರದ ಕ್ಯಾನ್ಸರ್ ಆಸ್ಪತ್ರೆ, ಮಿರಜ್ ಸೇವಾ ಸದನ ಆಸ್ಪತ್ರೆ, ಜೈ ಸಿಂಗ್ಪುರದ ಪಾಯೋಸ್ ಆಸ್ಪತ್ರೆ, ಸಾಂಗ್ಲಿಯ ಉಷಾಕಲಾ ಆಸ್ಪತ್ರೆ ಹಾಗೂ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಮತ್ತು ಆರೋಗ್ಯ ಉಚಿತ ತಪಾಸಣೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾ ನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ದೇವಸ್ಥಾನದ ಉತ್ತರಾಧಿ ಕಾರಿ ರೇಣುಕಾ ದೇವರು, ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಹಿರೇಮಠ ಗುಣದಾಳದ ಡಾ.ವಿವೇಕಾನಂದ ದೇವರು, ಗ್ರಾಪಂ ಅಧ್ಯಕ್ಷ ಬಾಳು ಧನಗರ ಇತರರು ಇದ್ದರು. ಮಲ್ಲಪ್ಪ ಸಿಂಧೂರ ನಿರೂಪಿಸಿದರು.