

ಬಾಗಲಕೋಟೆ : ಯಾವ ದ್ವಾರದಲ್ಲಿ ಎಲ್ಲರನ್ನು ಮುಕ್ತವಾಗಿ ಕರೆಯುವ ಗುಣ ಇರುತ್ತದೆಯೋ ಅದೇ ಮಹಾದ್ವಾರ, ಮನೆಯ ದ್ವಾರ ಮಹಾದ್ವಾರ ಆದರೆ ಮನೆಯೇ ಮಂದಿರವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಮಹಾಲಿಂಗಪುರ ಪಟ್ಟಣದ ಶತಮಾನ ಕಂಡ ಬನಶಂಕರಿದೇವಿ ದೇವಸ್ಥಾನದ ಮಹಾದ್ವಾರ ಗುರುವಾರ ಉದ್ಘಾಟಿಸಿ ಪಂಚ ಕಳಸಾರೋಹನ ನೇರವೇರಿಸಿ ಮಾತನಾಡಿದ ಅವರು, ದೇಹವೆ ದೇವ ನಿರ್ಮಿತ ದೇವಾಲಯ. ಶ್ರವಣವೇ(ಕಿವಿಗಳೇ) ಮೋಕ್ಷದ ಮಹಾದ್ವಾರ. ಕೀವಿಗಳೆಂಬ ದ್ವಾರ ಬಾಗಿಲು ಮೂಲಕ ಸತ್ಸಂಗ, ಅಧ್ಯಾತ್ಮ, ಸಹಬಾಳ್ವೆ, ಧರ್ಮ ಚಿಂತನೆಯ ಶೋತೃ ಮಾಡುವುದೇ ಜೀವನ ಮುಕ್ತಿಯ ಸಾಧನ ಎಂದರು.
ಸತ್ಸಂಗದಿAದಲೇ ಸಂಸಾರದ ವ್ಯಾಮೋಹ ನಿಸ್ಸಂಗ ಆಗುತ್ತದೆ. ಮನೆಗಳಿಗೆ ಇರುವದು ದ್ವಾರ, ದೇವಸ್ಥಾನಗಳಿಗೆ ಇರುವುದು ಮಹಾದ್ವಾರ. ದೇವಸ್ಥಾನದ ದ್ವಾರ ಪ್ರವೇಶಕ್ಕೆ ಮುಕ್ತ ಪ್ರವೇಶವಿರುತ್ತದೆ. ಆದರೆ ಮನೆಯ ದ್ವಾರಕ್ಕೆ ವ್ಯಕ್ತಿಗೆ ಸೀಮಿತವಾಗಿರುತ್ತದೆ. ಮನೆಯಲ್ಲಿರುವವರು ಯಾವುದೇ ಬೇಧವಿಲ್ಲದೇ ಸರ್ವರನ್ನು ಪ್ರೀತಿಯಿಂದ, ಸಮನಾಗಿ ಕಂಡರೆ, ನಮ್ಮ ದೇಹದಲ್ಲಿನ ಅರಿಷಡ್ ವರ್ಗಗಳನ್ನು ಕಳೆದರೆ ಮನೆಯಲ್ಲಿ ವಾಸಿಸುವವರು ದೇವರ ಸ್ವರೂಪಿಗಳಾಗಿ, ಮನೆಯ ದ್ವಾರವು ಮಹಾದ್ವಾರವಾಗಲು ಸಾಧ್ಯ ಎಂದು ಹೇಳಿದರು.
ಶಿವನ ಉಪಾಸನೆಯಂತೆ ಶಕ್ತಿಯೂ ಉಪಾಸನೆ ಮಾಡುತ್ತಾಳೆ. ಮಾಯೆಯಾಗಿ ಶಿವನಿಂದ ಬೇರ್ಪಡಿಸಿ ಶಕ್ತಿಯಾಗಿ ಶಿವನೊಡನೆ ಜೋಡಿಸುತ್ತಾಳೆ. ಬೇರ್ಪಡಿಸುವವಳು ಅವಳೇ ಜೋಡಿಸುವವಳು ಅವಳೇ ಎಂದರು.
ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮಿಜಿ ಮಾತನಾಡಿ, ಪುರಾಣ, ಪ್ರವಚನ ಕೇಳುವದರಿಂದ ಧರ್ಮದ ಅರಿವು ಆಗುತ್ತದೆ. ಪ್ರಸ್ತುತ ದಿನಗಳಲ್ಲಿ ಧರ್ಮವನ್ನು ಎತ್ತಿಹಿಡಿಯುವ ಅವಶ್ಯಕತೆ ಇದೆ. ಸತ್ಸಂಗದಿAದ ಧರ್ಮದ ಜಾಗೃತಿ ಆಗುತ್ತದೆ ಎಂದು ತಿಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಲಕ್ಕಪ್ಪ ಚಮಕೇರಿ ಮಾತನಾಡಿ, ೧೯೮೫ರಲ್ಲಿ ಮಹಾದ್ವಾರದ ಅಡಿಗಲ್ಲು ಪೂಜೆ, ೧೯೯೩ರಲ್ಲಿ ಬಾಗಿಲು ನಿರ್ಮಾಣ ಸೇರಿದಂತೆ ಅಂದಾಜು ೪೦ ವರ್ಷಗಳ ಕಾಲ ಅನೇಕರ ಸಹಕಾರದಿಂದ ಮಹಾದ್ವಾರ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸೋಲ್ಲಾಪೂರ-ಮೈಂದರಗಿಯ ಅಭಿನವ ರೇವಣಸಿದ್ದ ಪಟ್ಟದೇವರು, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಸ್ವಾಮಿಜಿ, ರನ್ನಬೆಳಗಲಿ ಸದಾಶಿವ ಗುರೂಜಿ ಸಾನ್ನಿಧ್ಯ ವಹಿಸಿದ್ದರು.ಹಿರಿಯರಾದ ಮಲ್ಲಪ್ಪ ಭಾವಿಕಟ್ಟಿ, ಶ್ರೀಶೈಲಪ್ಪ ಬಾಡನವರ, ಪ್ರಭು ಬೆಳಗಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಚಂದ್ರು ಗೊಂದಿ, ಯಲ್ಲಪ್ಪ ಹಟ್ಟಿ, ಬಿ.ವಿ.ಕೆರೂರ, ಈಶ್ವರ ಚಮಕೇರಿ, ಬಸವರಾಜ ಚಮಕೇರಿ, ಡಾ.ಬಿ.ಡಿ.ಸೋರಗಾಂವಿ, ಶಂಕರ ಅಂಬಿ, ಪ್ರಕಾಶ ಬಾಡನವರ,ಮಲ್ಲು ಕುಲ್ಲೋಳ್ಳಿ, ಅಶೋಕ ಅಂಗಡಿ, ಹಣಮಂತ ಬಡಿಗೇರ, ರಾಜೇಶ ಭಾವಿಕಟ್ಟಿ, ಸುನಿಲ ಜಮಖಂಡಿ ಸೇರಿದಂತೆ ಇತರರು ಇದ್ದರು.