

ಬೆಟ್ಟದಪುರ: ಆರೋಗ್ಯ ತಪಾಸಣಾ ಉಚಿತ ಶಿಬಿರಗಳು ಬಡವರಿಗೆ, ಮಧ್ಯಮ ವರ್ಗದ ಜನತೆಗೆ ವರದಾನವಾಗಿವೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ ಎಂದು ಹಿರಿಯ ವೈದ್ಯ ಡಾ.ಜೆ.ಸಿ.ರಾಜೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದ ಅವರು, ಆಧುನಿಕ ದಿನಗಳಲ್ಲಿ ನಾವೆಲ್ಲ ಸೇವಿಸುವ ಆಹಾರ ಪದ್ಧತಿ ಬದಲಾಗಿದೆ. ನಾವು ಸೇವಿಸುವ ಆಹಾರ ಸತ್ವಯುತವಾಗಿಲ್ಲ. ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಜೀವಸತ್ವ, ಪ್ರೋಟಿನ್‌ಗಳು ಸಿಗುತ್ತಿಲ್ಲ. ಇದರಿಂದ ದೇಹ ನಿತ್ಯ ಬದಲಾಗುತ್ತ ಸಾಗುತ್ತದೆ. ಆರೋಗ್ಯದ ವಿಚಾರದಲ್ಲಿ ನಾವು ಎಚ್ಚರವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ವಿಚಾರವಾಗಿದೆ ಎಂದರು.
ಶಿಬಿರದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಮಡಿಕೇರಿ ಮೆಡಿಕಲ್ ಕಾಲೇಜಿನ ಎಜೆ.ಡೀನ್ ಮತ್ತು ನಿರ್ದೇಶಕ ಡಾ.ಲೋಕೇಶ್, ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ತಜ್ಞ ವೈದ್ಯ ಡಾ.ನಂಜುಂಡಯ್ಯ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಡಾ.ಪ್ರಮೋದ್, ಡಾ.ಮೋನಿಕಾ, ಡಾ.ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಕುಮಾರ, ಕ್ಲಸ್ಟರ್ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.