ಸತ್ಕರ್ಮ ಮಾಡಿದರೆ ಸಿಗಲಿದೆ ಪರಮಾತ್ಮನ ಪ್ರೀತಿ - ಶ್ರೀಶೈಲ ಪೀಠದ ಜಗದ್ಗುರು

16mjr1
Published on

ಮಾಂಜರಿ: ಬದುಕಿನ ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪವಿತ್ರ-ಅಪವಿತ್ರ, ಒಳ್ಳೆಯದು-ಕೆಟ್ಟದ್ದನ್ನು ಬೇರ್ಪಡಿಸುವುದೇ ಅಧ್ಯಾತ್ಮ. ಇವುಗಳಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಪರಮಾತ್ಮನ ಪ್ರೀತಿ ಗಳಿಸಲು ಸಾಧ್ಯವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಯಡೂರು ಗ್ರಾಮದ ಕಲ್ಯಾಣ ಮಂಟಪದಲ್ಲಿ ಬುಧವಾರ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪನ್ಯಾಸಕ ಹಾಗೂ ಶ್ರೀವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ದೇಶ್ವರ ಮಠ ಯಡೂರಿನ ಸೈಟ್ ಇನ್‌ಚಾರ್ಜ್ ಸುನೀಲ್ ಬಾಬುರಾವ್ ಬಿರದೆ ಸೇವಾ ನಿವತ್ತಿ ಹಾಗೂ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ನೌಕರ ಜನರ ಉದ್ಧಾರಕ್ಕಾಗಿ ಕೆಲಸ ಮಾಡಿದರೆ ಗುರುವಿನ ಆಶೀರ್ವಾದ ಸಿಗುತ್ತದೆ.

ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನರ ಪ್ರೀತಿ ಗಳಿಸಲು ಸಾಧ್ಯ ಎಂದು ತಿಳಿಸಿದರು. ಚಿಕ್ಕೋಡಿ ಉಪವಿಭಾಗೀಯ ಅಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ, ಜಗದ್ಗುರುಗಳು, ಸಂತರು ಮತ್ತು ಮಹಾತ್ಮರು ವೈಭವದಿಂದ ಬದುಕಲ್ಲ. ಜನಸಾಮಾನ್ಯರ ಹಾಗೆ ಸರಳವಾಗಿ ಜೀವಿಸುತ್ತಾರೆ. ನಡೆ ನುಡಿಗಳಿಂದ ಭಕ್ತರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅವರ ಸಂಕಷ್ಟ ಪರಿಹರಿಸಿ ಮುನ್ನಡೆಯುತ್ತಾರೆ ಎಂದರು.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗಣವರ್ ಮಾತನಾಡಿ, ಜಗತ್ತೆಲ್ಲವೂ ಈಶ್ವರಮಯ. ನಾನೆಂಬ ಅಹಂಕಾರ ತ್ಯಜಿಸಬೇಕೆಂದು ಕರೆ ನೀಡಿದರು. ಎಲ್ಲದರಲ್ಲೂ ಭಗವಂತನೇ ಇದ್ದಾನೆ. ಸಾಧು ಸಂತರು ಜನರಿಗೆ ಸತ್ಯದ ದರ್ಶನ ಮಾಡಿಸುತ್ತಾರೆ ಎಂದು ತಿಳಿಸಿದರು.

ಹುಬ್ಬಳ್ಳಿಯ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ ನಿವತ್ತ ಕುಲಪತಿ ಅಶೋಕ ಶೆಟ್ಟರ್, ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ನೂಲಿನ ಗುರುಸಿದ್ದೇಶ್ವರ ಶಿವಾಚಾರ್ಯರು, ಸಿಬಿಕೆ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತ್‌ರಾವ್ ದೇಸಾಯಿ, ಶ್ರೀಕಾಂತ ಉಮರಾಣಿ, ದಾದು ಕಾಗವಾಡೆ, ಸಂಜಯ ಪಾಟೀಲ, ಅಜಯ ಸೂರ್ಯವಂಶಿ, ರಾಜೇಶ್ವರಿ ಕವಟಗಿಮಠ, ಡಂಗಣ್ಣವರ ಕೆವಿ ತಾಂತ್ರಿಕ ವಿಶ್ವವಿದ್ಯಾಲಯ ಉಪನ್ಯಾಸಕ ಎಂ.ಆರ್. ಪಾಟೀಲ, ಹುಬ್ಬಳ್ಳಿಯ ಮಂಜುನಾಥ್ ಸಾಲಿಮಠ, ನಿವೃತ್ತ ನ್ಯಾಯಾಧೀಶ ಈರಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net