

ಕಲಬುರಗಿ: ಗ್ರಾಮೀಣ ಜನ ಉದ್ಯೋಗ ಅರಸಿ ಗುಳೆ ಹೋಗುವುದನ್ನು ಸಣ್ಣ, ಗುಡಿ ಕೈಗಾರಿಕೆಗಳಿಂದ ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಸರಳೀಕರಣ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸ್ಮಾಲ್ ಇಂಡಸ್ಟಿಸ್ ಡೆವಲಪಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಸಿಡ್ಬಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಡಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸೌಲಭ್ಯ ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಕೈಗಾರಿಕೋದ್ಯಮಕ್ಕೆ ಹೆಚ್ಚು ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಸಣ್ಣ ಕೈಗಾರಿಕೆ, ಉದ್ದಿಮೆದಾರರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಈ ಭಾಗದಲ್ಲಿ ಸಣ್ಣ ಉದ್ದಿಮೆ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ ಸವಲತ್ತು, ಜಿಎಸ್‌ಟಿ ಇತರ ತಾಂತ್ರಿಕ ನೆರವು ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಮಾಡಲಾಗಿದೆ. ವಿಜಯಪುರ, ಯಾದಗಿರಿಗಳಲ್ಲಿ ಆಯೋಜಿಸಿದ್ದು, ಬೀದರ್‌ನಲ್ಲೂ ಶೀಘ್ರ ಆಯೋಜಿಸಲಾಗುವುದು ಎಂದರು.
ಸಣ್ಣ ಕೈಗಾರಿಕೆಗಳಿಗೂ ಸಾಲ ನೀಡಲು ಬ್ಯಾಂಕ್‌ಗಳು ಮುಂದಾಗಬೇಕು. ದೊಡ್ಡ ಕೈಗಾರಿಕೆಗಳಿಗೆ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಹೋಗಿ ಸಾಲ ಕೊಡುತ್ತವೆ. ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿಗಳು ಸಣ್ಣ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿದರು. ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ವ್ಯವಸ್ಥಾಪಕ ನಿರ್ದೇಶಕ ಮಹೇಶ ಬಿ., ಸಿಡ್ಬಿ ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ಶಿವಕುಮಾರ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶ ಕುಮಾರ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್, ಕಾಸಿಯಾ ಪದಾಧಿಕಾರಿಗಳಾದ ಎಂ.ಜಿ. ರಾಜಗೋಪಾಲ, ಶ್ರೇಯಾನ್ಸ್ ಕುಮಾರ ಜೈನ್, ಅರುಣ ಪಡಿಯಾರ್ ಎಸ್, ಎಚ್.ಕೆ. ಮಲ್ಲೇಶಗೌಡ, ಲತಾ ಎಸ್., ಭೀಮಾಶಂಕರ ಬಿ.ಪಾಟೀಲ್ ಇತರರಿದ್ದರು. ಕಾಸಿಯಾ ಅಧ್ಯಕ್ಷ ಸಿ.ಎ. ಶಶಿಧರ ಶೆಟ್ಟಿ ಸ್ವಾಗತಿಸಿದರು. ಎಸ್.ನಾಗರಾಜು ನಿರೂಪಣೆ ಮಾಡಿ ವಂದಿಸಿದರು.