

ಬಾಗೂರು: ಹೋಬಳಿಯ ನಾಗರನವಿಲೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾಗೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಬುಧವಾರ ಜರುಗಿತು.
ಬೆಳಗ್ಗೆ ಗಿರಿಜಾ ಕಲ್ಯಾಣೋತ್ಸವ, ಆನೆ ಉತ್ಸವ, ಮೂಲದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮಹಾಮಂಗಳಾರತಿ ನೆರವೇರಿಸಲಾಯಿತು. ಪಾರ್ವತಿ ದೇವಿ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಮೆರೆ ದೇವರ ಉತ್ಸವ ಮೂಲ ದೇಗುಲದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆ ಊರಿನ ಮುಂಭಾಗ ಸಾಗಿದ ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ನೈವೇದ್ಯ ಮಹಾಮಂಗಳಾರತಿ ನಂತರ ಭಕ್ತರು ಜಯ ಘೋಷದೊಂದಿಗೆ ರಥವನ್ನು ಎಳೆದರು.
ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಲಾಯಿತು. ಮೂಲ ದೇಗುಲದ ಮುಂಭಾಗ ಅನ್ನದಾಸೋಹ ನಡೆಯಿತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸಿ.ಎನ್.ಬಾಲಕೃಷ್ಣ, ಡಿಡಿಎಲ್‌ಆರ್ ಸುಜಯ್, ಎಡಿಎಲ್ಆರ್ ಪ್ರಸಾದ್, ತಹಸೀಲ್ದಾರ್ ನವೀನ್ ಕುಮಾರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಎನ್.ಪರಮೇಶ್, ಮುಜರಾಯಿ ತಹಸೀಲ್ದಾರ್ ಲತಾ, ಬಿಜೆಪಿ ಮುಖಂಡ ನವಿಲೇ ಅಣ್ಣಪ್ಪ, ಎ.ಸಿ.ಆನಂದ್ ಕುಮಾರ್, ಅರ್ಚಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಸವರಾಜ್, ಆರ್‌ಐ ರಾಜು, ಮುಖಂಡರಾದ ನಾಗರಾಜ್, ಎನ್.ಕೆ.ನಾಗಪ್ಪ, ದೇವರಾಜ್, ದಿನೇಶ್, ಎನ್.ಎಲ್.ನಾಗರಾಜ್, ರಾಜು, ನಾಗು ಹಾಜರಿದ್ದರು.