

ಬಾಗಲಕೋಟೆ: ಬಿಜೆಪಿ ಹಿರಿಯ ನಾಯಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಕುರಿತು ಕಾಂಗ್ರೆಸ್ ಸರ್ಕಾರ ಸಚಿವರು ನೀಡಿದ ಹೇಳಿಕೆ ಖಂಡನೀಯ. ಶೋಷಿತರ ಬಗ್ಗೆ ಅವರಿಗೆ ಗೌರವ, ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಮ್ಮ ತಂದೆಯ ನಾಮ ಬಲದಿಂದ ರಾಜಕೀಯ ಅಽಕಾರದಲ್ಲಿ ಇದ್ದಾರೆ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ ಅಲ್ಲದೇ ಹೋಗಿದ್ದರೆ ಅವರು ಏನು ಆಗುತ್ತಿರಲಿಲ್ಲ. ಆದರೆ ಛಲವಾದಿ ನಾರಾಯಣಸ್ವಾಮಿ ಅವರು ಅತ್ಯಂತ ತಳಮಟ್ಟದಿಂದ ರಾಜಕಾರಣದಲ್ಲಿ ಮೇಲೆ ಬಂದಿದ್ದಾರೆ. ಅಂತಹವರ ಬಗ್ಗೆ ಹಗರುವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕೂಡಾ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ದ ಆರೋಪ ಮಾಡುವಾಗ ಸಣ್ಣತನದ ಮಾತುಗಳನ್ನಾಡಿದ್ದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಕಾರಣಿ ಆದವರೂ ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಗೌರವದಿಂದ ನಡೆದುಕೊಳ್ಳಬೇಕು ಎಂದರು.
ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಳಿ, ಸತ್ಯನಾರಾಯಣ ಹೇಮಾದ್ರಿ, ಯಲ್ಲಪ್ಪ ನಾರಾಯಣಿ, ಶಿವಾನಂದ ಸುರಪುರ ಇದ್ದರು.