ಸಚಿವರ ಜತೆ ಓಡಾಡುವ ಆಫೀಸ್ !!

25hly3p.jpg
Published on

ಸುಭಾಸ ಧೂಪದಹೊಂಡ ಕಾರವಾರ
ಇಲಾಖೆಯ ಜಿಲ್ಲಾ ಮುಖ್ಯ ಕಚೇರಿ ಜಲ್ಲಾ ಕೇಂದ್ರದಲ್ಲಿರುವುದು ಸಾಮಾನ್ಯ. ಆದರೆ, ಇಲ್ಲೊಂದು ಕಚೇರಿಯ ಕೇಂದ್ರ ಸ್ಥಾನ ಸಚಿವರು ಬದಲಾದಂತೆ ಬದಲಾಗುತ್ತಿದೆ.!
ಈ ಹಿಂದೆ ಹಳಿಯಾಳ, ಶಿರಸಿಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿ(ಎಂಐ ಡಿವಿಜನಲ್ ಆಫೀಸ್)ಯನ್ನು ಕಾರವಾರಕ್ಕೆ ಸ್ಥಳಾಂತರಿಸಲು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಎಂಐ ಕಚೇರಿ ವಿಚಾರ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಓಡಾಟದ ಅನುಭವ:
1984 ರಿಂದ ಹಳಿಯಾಳದಲ್ಲಿ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಲ್ಲಿಂದ ಕಾರ್ಯನಿರ್ವಹಿಸುತ್ತಾರೆ. ಅಲ್ಲಿ ಇಲಾಖೆಗೆ ಸ್ವಂತ ಜಾಗ ಹಾಗೂ ಕಟ್ಟಡವಿದೆ. ಆಡಳಿತದ ಹಿತ ದೃಷ್ಟಿಯಿಂದ 2006 ರಲ್ಲಿ ಎಂಐ ಡಿವಿಜನಲ್ ಆಫೀಸನ್ನು ಕಾರವಾರಕ್ಕೆ ಸ್ಥಳಾಂತರಿಸಲು ಆಗಿನ ಜಿಲ್ಲಾಽಕಾರಿ ಆದೇಶಿಸಿದ್ದರು. ಆದರೆ, ಅದರ ವಿರುದ್ಧ ಗಳಿಯಾಳ ಭಾಗದವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರವೂ ಕಚೇರಿ ಹಳಿಯಾಳದಲ್ಲೇ ಮುಂದುವರಿಯಿತು. 2009 ರಲ್ಲಿ ಕಚೇರಿಯನ್ನು ಶಿರಸಿಯ ಎಪಿಎಂಸಿ ಪ್ರಾಂಗಣದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಏಳು ವರ್ಷದಲ್ಲಿ ಎಂದರೆ 2016 ರಲ್ಲಿ ಮತ್ತೆ ಎಂಐ ಆಫೀಸ್ ವಾಪಸ್ ಹಳಿಯಾಳಕ್ಕೆ ಸ್ಥಳಾಂತರಗೊಂಡಿತು.
ಸಚಿವರ ಜತೆ ಬದಲು:
ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದ ಆರ್.ವಿ.ದೇಶಪಾಂಡೆ ಅವರು ತಮ್ಮ ಕ್ಷೇತ್ರ ಹಳಿಯಾಳದಲ್ಲಿ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯನ್ನು ಇರಿಸಿಕೊಂಡಿದ್ದರು. 2009 ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಕ್ಷೇತ್ರ ಶಿರಸಿಗೆ ಕಚೇರಿಯನ್ನು ಕೊಂಡೊಯ್ದಿದ್ದರು. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಆರ್.ವಿ.ದೇಶಪಾಂಡೆ ಉಸ್ತುವಾರಿ ವಹಿಸಿಕೊಂಡ ನಂತರ ತಮ್ಮ ಕ್ಷೇತ್ರಕ್ಕೆ ಸಣ್ಣ ನೀರಾವರಿ ಇಇ ಕಚೇರಿಯನ್ನು ಸ್ಥಳಾಂತರಿಸಿದ್ದರು.
ರೂಪಾಲಿ ಒತ್ತಾಯ:
ಸಣ್ಣ ನೀರಾವರಿ ಇಲಾಖೆ ಕಾರ್ಯವೈಖರಿಯ ಬಗ್ಗೆ ಪ್ರತಿ ಸಭೆಯಲ್ಲೂ ಜನಪ್ರತಿನಿಧಿಗಳಿಂದ ಅಸಮಾಧಾನ, ಆರೋಪಗಳು ಕೇಳಿ ಬರುತ್ತಲೇ ಇವೆ. ಅಧಿಕಾರಿಗಳು ಸಭೆಗಳಿಗೆ ಹಾಜರಾಗುವುದಿಲ್ಲ. ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂಬ ಆಕ್ಷೇಪಗಳಿವೆ. ಸಣ್ಣ ನೀರಾವರಿ ಇಇ ಕಚೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವಂತೆ 2019 ರಲ್ಲಿ ಜಿಲ್ಲೆಗೆ ಆಗಮಿಸಿದ ಸಣ್ಣ ನೀರಾವರಿ ಸಚಿವ ಜೆ.ಮಾಧುಸ್ವಾಮಿ ಅವರಿಗೆ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ಮಾಡಿದ್ದರು. ಮೊನ್ನೆ ನಡೆದ ಸಭೆಯಲ್ಲೂ ಶಾಸಕಿ ರೂಪಾಲಿ ನಾಯ್ಕ ಅವರೇ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ.


ಕರಾವಳಿಯಲ್ಲಿ ಕಾಮಗಾರಿ
ಸಮುದ್ರದ ಉಪ್ಪು ನೀರು ಜಮೀನುಗಳಿಗೆ ನುಗ್ಗುವುದನ್ನು ತಡೆಯಲು ಖಾರ್ಲ್ಯಾಂಡ್ ಒಡ್ಡು ಹಾಗೂ ಫ್ಲಾಪ್ ಗೇಟ್ ನಿರ್ಮಾಣಕ್ಕೆ ಜಿಲ್ಲೆಯ ಕರಾವಳಿಯ 3 ಕ್ಷೇತ್ರಗಳಿಗೆ 300 ಕೋಟಿ ರೂ. 2021 ನೇ ಸಾಲಿನ ಬಜೆಟ್‌ನಲ್ಲಿ ಮಂಜೂರಾಗಿತ್ತು. ಅದರಲ್ಲಿ 260 ಕೋಟಿ ವೆಚ್ಚದಲ್ಲಿ 68 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 33 ಕಾಮಗಾರಿಗಳು ಈಗಾಗಲೇ ಟೆಂಡರ್ ಆಗಿವೆ. ನವೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ. ಕರಾವಳಿಯಲ್ಲೇ ದೊಡ್ಡ ಪ್ರಮಾಣದ ಕಾಮಗಾರಿ ಇರುವುದರಿಂದ ಕಚೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸುವುದು ಸೂಕ್ತ ಎಂಬುದು ಈಗಿನ ಉಸ್ತುವಾರಿ ಸಚಿವರ ಅಭಿಪ್ರಾಯ



ಯೋಜನೆಗಳ ಅನುಷ್ಠಾನ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಚೇರಿಗಳು ಜಿಲ್ಲಾ ಕೇಂದ್ರದಲ್ಲಿದ್ದರೆ ಸೂಕ್ತ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯನ್ನು ಕಾರವಾರಕ್ಕೆ ಸ್ಥಳಾಂತರಿಸಲು ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು.
ಕೋಟ ಶ್ರೀನಿವಾಸ ಪೂಜಾರಿ
ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net