ಸಗಡಗೇರಿ, ಅಗ್ರಗೋಣಕ್ಕೆ ನೀರಿನ ಯೋಜನೆ

13ankola1a
Published on

ಅಂಕೋಲಾ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅಂಕೋಲಾ ತಾಲೂಕಿನ ಸಗಡಗೇರಿ ಮತ್ತು ಅಗ್ರಗೋಣ ಗ್ರಾಮ ಪಂಚಾಯಿತಿಯನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ನಿರಂತರ ಹೋರಾಟದ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ಸಗಡಗೇರಿ, ಅಗ್ರಗೋಣ ಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಿದೆ.

ಈ ಯೋಜನೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ ಸಗಡಗೇರಿ ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದು, ಈ ಹಿಂದೆ ಬಳಲೆ ಮತ್ತು ಮಾದನಗೇರಿಯಲ್ಲಿ ಸಮಿತಿಯ ಅಧ್ಯಕ್ಷ ದೇವರಾಯ ಜಿ. ನಾಯಕ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದರ ಫಲವಾಗಿ ಈ ಎರಡು ಪಂಚಾಯಿತಿ ಸೇರ್ಪಡೆಗೊಂಡಿವೆ.

ಸಗಡಗೇರಿ, ಅಗ್ರಗೋಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ನೀರಿನ ಅಭಾವವಿದ್ದರೂ ಇದನ್ನು ತಪ್ಪಿಸಿ ಕುಮಟಾ ತಾಲೂಕಿನ ಹಲವು ಗ್ರಾ.ಪಂ. ಗಳಿಗೆ ನೀರೊದಗಿಸುವ ಯೋಜನೆಯಾಗಿತ್ತು. ಸಗಡಗೇರಿ ಮಾರ್ಗವಾಗಿಯೇ ಪೈಪ್ ಲೈನ್ ಅಳವಡಿಕೆ ಮಾಡಿ ನೀರನ್ನು ಸಾಗಿಸಬೇಕಾಗಿತ್ತು. ಈ ಹಿನ್ನ್ನೆಲೆಯಲ್ಲಿ ಎರಡು ಪಂಚಾಯಿತಿಯವರು ಪ್ರತಿಭಟನೆಗೆ ಬೆಂಬಲಿಸಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಈಗ ನೀರು ಪೂರೈಸುವ ಕುರಿತು ಯೋಜನೆ ಸಿದ್ಧಪಡಿಸಿ ಅಡಿಗಲ್ಲು ಸಮಾರಂಭ ನಡೆಸುತ್ತಿರುವುದು ಸಂತಸದಾಯಕ ವಿಷಯವಾಗಿದೆ. ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಪ್ರತಿಭಟನೆಯಲ್ಲಿ ಅರವಿಂದ ಬಿಳಿಸಿರಿ, ಶಿವು ಗೌಡ ಕಾಮಗೆ, ದೇವು ಗೌಡ ಹೊಸೂರ, ಸುಬ್ಬಯ್ಯ ಆರ್. ನಾಯಕ, ದೇವಿ ವಿಷ್ಣು ಅಂಬಿಗ, ಸುಮಿತ್ರಾ ಅಂಬಿಗ, ಸವಿತಾ ಗಣೇಶ ಅಂಬಿಗ, ಪದ್ಮಾ ಅಂಬಿಗ, ಸರೋಜಾ ಅಂಬಿಗ, ಚಂದ್ರಭಾಗಿ ಅಂಬಿಗ, ಶಿವಮ್ಮ ಹೊನ್ನಪ್ಪ ಅಂಬಿಗ, ಕಮಲಾ ಅಂಬಿಗ, ಕಮಲಾ ಆಗೇರ, ಶಾಂತ ಆಗೇರ, ಸುಭಾಷ ಗೌಡ, ದಾಮು ಗೌಡ, ರವೀಂದ್ರ ನಾಯಕ, ಸ್ರವಣ ನಾಯ್ಕ, ಸತೀಶ ಗೌಡ, ಸೀತೆ ಗೌಡ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.

ಇಂದು ಅಡಿಗಲ್ಲು: ಈ ಯೋಜನೆಗೆ ಮಾದನಗೇರಿ-ಬಳಲೆ ಸಮೀಪ ಶಾಸಕಿ ರೂಪಾಲಿ ನಾಯ್ಕ ಹಾಗೂ ಇತರೆ ಜನಪ್ರತಿನಿಧಿಗಳು ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ.

ಎರಡು ಪಂಚಾಯಿತಿ ಜನರೊಂದಿಗೆ ನಾವು ನಡೆಸಿದ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ. ಇನ್ನು ಯಾವ ಯಾವ ಮಾರ್ಗಕ್ಕೆ ಹೇಗೆ ನೀರು ಒದಗಿಸುತ್ತಾರೆ ಎಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. | ದೇವರಾಯ ಜಿ. ನಾಯಕ ಅಧ್ಯಕ್ಷರು, ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ ಸಗಡಗೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net