ಸಂಸ್ಕಾರಯುತ ಶಿಕ್ಷಣ ಆದರ್ಶ ವ್ಯಕ್ತಿತ್ವ ರೂಪಿಸುತ್ತದೆ

bkt-6-7
Published on

ಬಾಗಲಕೋಟೆ: ತಂತ್ರಜ್ಞಾನ ಯುಗದಲ್ಲಿರುವ ಇಂದಿನ ಯುವ ಸಮೂಹವು ಸಮಾಜದಲ್ಲಿ ಸಾಧಕರಾಗಬೇಕಾದರೆ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗುರುಸ್ವಾಮಿ ಜಿ.ಹಿರೇಮಠ ಅವರು ಹೇಳಿದರು.

ಸಮೀಪದ ಬೆನಕಟ್ಟಿ ಗ್ರಾಮದ ಹೇಮರೆಡ್ಡಿ ಮಲ್ಲಮ್ಮ ಪ್ರೌಢಶಾಲೆಯ ಪಂಚವಟಿ ವನದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಮತ್ತು ತಾಲೂಕು ಘಟಕ ಬಾಗಲಕೋಟೆ ಇವರ ಹಮ್ಮಿಕೊಂಡಿದ್ದ  ದಿ ರಾಮಪ್ಪ ಕೃಷ್ಣಪ್ಪ ಯಡಹಳ್ಳಿ ಹಾಗೂ ದಿ.ಭೀಮಪ್ಪ ಹನಮಪ್ಪ ಗೊರವರ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.

ಮುಂದುವರಿದ ಮಾತನಾಡಿದ ಅವರು ಯುವ ಸಮುದಾಯವು ತಮ್ಮ ಬದುಕಿನಲ್ಲಿ ಬರುವ  ಸವಾಲುಗಳನ್ನು, ಸಮಸ್ಯೆಗಳನ್ನು ನಿಭಾಯಿಸುವ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮತ್ತು ಪಡೆಯುವ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದತ್ತಿ ದಾನಿಗಳಾದ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಎನ್.ಬಿ‌.ಗೊರವರ ಮಾತನಾಡಿ, ನಮ್ಮ ಬದುಕಿಗೆ ಸಂಸ್ಕಾರ ಬೇಕು, ಸಮಾಜ ಸುಧಾರಣೆಗೆ ಶಿಕ್ಷಣ ಬೇಕು, ಶಿಕ್ಷಣ ಮತ್ತು ಸಂಸ್ಕಾರದಿಂದ ನಮ್ಮ ಜೀವನ ಮೌಲ್ಯವು ಹೆಚ್ಚುತ್ತದೆ ಎಂದರು.

ಅತಿಥಿಗಳಾಗಿ  ಕೆ.ಪಿ‌.ಅರಷಿನಗೋಡಿ ಮಾತನಾಡಿ ದಿ.ರಾಮಪ್ಪ  ಯಡಹಳ್ಳಿ ಅವರು ಸಮಾಜಮುಖಿ ಶಿಕ್ಷಕರಾಗಿ ಸಲ್ಲಿಸಿದ ಸೇವೆ, ದಿ.ಭೀಮಪ್ಪ ಗೊರವರ  ಅವರು ನಿಸ್ವಾರ್ಥದಿಂದ ಮಾಡಿರುವ ಸಮಾಜ ಸೇವೆಯು ಇಂದಿನವರಿಗೆ ಸ್ಪೂರ್ತಿ ಹಾಗೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು‌.        

ದಿವ್ಯ ಸಾನಿಧ್ಯ ವಹಿಸಿದ್ದ ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಪರಮ ಪೂಜ್ಯ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಜೀಯವರು ಆಶೀರ್ವಚನ ನೀಡಿ, ಮನುಷ್ಯ ಪರೋಪಕಾರದ ಗುಣಗಳನ್ನು ಬೆಳಸಿಕೊಂಡು ಬದುಕಿದರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ತಿಳಿಸಿದರು.           

ಪ್ರಗತಿಪರ ರೈತ ಲಕ್ಷ್ಮಪ್ಪ  ಬಾಳಕ್ಕನವರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ  ಉದ್ಘಾಟಿಸಿದರು.  ಮುಖ್ಯ ಶಿಕ್ಷಕ ಎಂ.ಎ.ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನಿವೃತ್ತ  ಕೃಷಿ ಅಧಿಕಾರಿಗಳಾದ ಹೆಚ್.ಬಿ.ಗೊರವರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ದತ್ತಿ ದಾನಿಗಹಾದ ಕೃಷ್ಣಾ ಯಡಹಳ್ಳಿ, ಸಿ.ಎನ್.ಬಾಳಕ್ಕನವರ,  ತಾಲೂಕ ಕಸಾಪ ಅಧ್ಯಕ್ಷರಾದ ಪಾಂಡುರಂಗ ಸಣ್ಣಪ್ಪನವರ, ಕಸಾಪ ಶಿರೂರು ವಲಯ ಘಟಕದ ಅಧ್ಯಕ್ಷರಾದ ಸಂಜಯ ನಡುವಿನಮನಿ ಸೇರಿದಂತೆ ಗಣ್ಯರು ವೇದಿಕೆ ಮೇಲೆ  ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಾದ ಎಸ್.ಎಸ್.ಜಮಾದಾರ, ಮುತ್ತುರಾಜ ಗೊರವರ, ಕರಣಿಕ ವೈ.ಟಿ.ಸನಗಿನ, ಗ್ಯಾನಪ್ಪ ವಾಲಿಕಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net