

ಬಾಗಲಕೋಟೆ: ಬಾಗಲಕೋಟೆ ಮಾರ್ಗವಾಗಿ ದೆಹಲಿಗೆ ತೆರಳುತ್ತಿದ್ದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಉಂಟಾದ ಹಿನ್ನಲೆಯಲ್ಲಿ ನಗರದ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಭಾನುವಾರ ದಾಖಲಿಸಲಾಗಿದೆ.
ವಿಜಯಪುರದಿಂದ, ಬಾಗಲಕೋಟೆ, ಬೆಳಗಾವಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ಹೊರಟಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿಜಯಪುರದಿಂದ ಬಾಗಲಕೋಟೆ ಮಾರ್ಗ ಮಧ್ಯ ವೇಳೆ ಎದೆನೋವು ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಈ ಹಿನ್ನಲೆಯಲ್ಲಿ ಕೂಡಲೇ ಅವರ ಆಪ್ತರು ಕುಮಾರೇಶ್ವರ ಆಸ್ಪತ್ರೆಗೆ ಮಧ್ಯಾಹ್ನ ೩.೩೦ ಕ್ಕೆ ದಾಖಲಿಸಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡಲಾಯಿತು. ಇಸಿಜಿ, ಇಕೊ ಟೆಸ್ಟ್ಗೆ ಒಳಪಡಿಸಲಾಯಿತು. ಎದೆ ನೋವು, ಉಸಿರಾಟದ ಸಮಸ್ಯೆ ಉಂಟಾದ ಕಾರಣ ಹೃದ್ರೋಗ ತಜ್ಞ ಡಾ.ಸುಭಾಷ ಪಾಟೀಲ, ಡಾ.ಸಮೀರ ಕುಲಕರ್ಣಿ ನೇತೃತ್ವದ ತಂಡ ಚಿಕಿತ್ಸೆ ನೀಡಿದರು.
ರಮೇಶ ಜಿಗಜಿಣಗಿ ಕಳೆದ ಎಂಟು ದಿನಗಳಿಂದ ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಇತ್ತು, ಹೀಗಾಗಿ ವಿಶೇಷ ಚಿಕಿತ್ಸೆ ನೀಡಲಾಯಿತು. ಸಂಜೆ ವೇಳೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ.
ಸಂಸದ ಆರೋಗ್ಯ ಕುರಿತು ಮಾಹಿತಿ ನೀಡಿದ ಡಾ.ಸುಭಾಷ ಪಾಟೀಲ, ಎದೆನೋವು, ಉಸಿರಾಟ ಸಮಸ್ಯೆ ಹಿನ್ನಲೆಯಲ್ಲಿ ರಮೇಶ ಜಿಗಜಿಣಗಿ ಅವರು ಮಧ್ಯಾಹ್ನ ೩.೩೦ಕ್ಕೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಕ್ಸಿಜನ ಲೇವಲ್ ಕಡಿಮೆ ಇತ್ತು. ಹೃದಯ ಬಡಿತದಲ್ಲಿ ವ್ಯತ್ಯಾಸವಿತ್ತು. ಆಕ್ಸಿಜನ್ ನೀಡಿ ಸಿಟಿ ಸ್ಕ್ಯಾನ್, ಇಸಿಜಿ ಮಾಡಿ ತಪಾಸಣೆ ಮಾಡಲಾಗಿದೆ. ಪುಪಸ್‌ದಲ್ಲಿ ಸ್ವಲ್ಪ ಪ್ರಮಾಣ ವಾಟರ ಕಂಟೆಂಟ್ ಸ್ಟೋರ ಆಗಿತ್ತು. ಚಿಕಿತ್ಸೆ ನೀಡಿದ ಬಳಿಕ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ, ಹೃದಯಾಘಾತ ಆಗಿಲ್ಲ. ಮೊದಲಿಂದಲೂ ಈ ರೀತಿ ಆರೋಗ್ಯ ಸಮಸ್ಯೆ ಇತ್ತು. ಸದ್ಯ ಆರೋಗ್ಯವಾಗಿದ್ದಾರೆ. ಭಯ ಪಡುವ ಅವಶ್ಯಕತೆ ಇಲ್ಲ. ಎರಡು ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿದರು.
ರಮೇಶ ಜಿಗಜಿಣಗಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ತಕ್ಷಣಕ್ಕೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗಮಿಸಿ ಅವರ ಚಿಕಿತ್ಸೆ ವಿಶೇಷವಾದ ಕಾಳಜಿ ವಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸಂಸದ ಪಿ.ಸಿ.ಗದ್ದಿಗೌಡರ, ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಯಂಕಂಚಿ, ಶಿವಾನಂದ ಟವಳಿ ಹಾಗೂ ಸಂಬಂಽಕರು ಧಾವಿಸಿದರು.