

ಬೇಲೂರು: ಬಸವೇಶ್ವರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಯಾವುದೇ ಜಾತಿ, ವರ್ಗ ಸಂಘರ್ಷದ ತಾರತಮ್ಯಗಳಿರುವುದಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತದಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರರು ನುಡಿದಂತೆ ನಡೆದವರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಡಗಿದ್ದ ಮೌಢ್ಯ, ಕಂದಾಚಾರಗಳು, ಅಂಕು ಡೊಂಕುಗಳನ್ನು ಹೋಗಲಾಡಿಸಿದವರು. ನಾವುಗಳು ಸಹ ಬಸವೇಶ್ವರರಂತೆ ಎಲ್ಲರೊಳಗೊಂದಾಗಿ ಕೆಲಸ ಮಾಡಿದರೆ ಕೈಲಾಸ ಕಾಣಬಹುದು. ಬಸವಣ್ಣನವರು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕಿದೆ. ಬಸವಣ್ಣನವರ ಜಯಂತಿಯನ್ನು ಸಂಸತ್‌ನಲ್ಲಿ ಪ್ರಥಮ ಬಾರಿಗೆ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಎಲ್ಲ ಹಬ್ಬ ಹರಿದಿನಗಳಿಗಿಂತಲೂ ಬಸವೇಶ್ವರರ ಜಯಂತಿ ಶ್ರೇಷ್ಠ. ಬಸವಣ್ಣ ಮತ್ತು ಅಂಬೇಡ್ಕರ್‌ರವರ ಆಶಯದಂತೆ ಎಲ್ಲರೂ ನಡೆದರೆ ವಿಶ್ವದ ಭೂಪಟದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿರುತ್ತದೆ ಎಂದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಬಸವಣ್ಣನವರ ಒಂದೊಂದು ವಚನಗಳು ಪ್ರತಿಯೊಬ್ಬರ ಬದುಕಿಗೆ ಬೆಳಕು ನೀಡುತ್ತದೆ. ಪುರುಷ ಹಾಗೂ ಮಹಿಳೆ ಸಮಾನರು ಎಂಬುದನ್ನು ಸಾರಿ ಹೇಳಿದವರು. ಕಾಯಕವೇ ಕೈಲಾಸ ಎಂಬ ಚಿಂತನೆಯೊಂದಿಗೆ ಕಾಯಕಕ್ಕೆ ಒತ್ತು ನೀಡಿದರು. ಜಾತೀಯತೆ ವಿರುದ್ಧ ಹೋರಾಡಿ ಅನುಭವ ಮಂಟಪ ನಿರ್ಮಿಸಿ ಎಲ್ಲ ಜಾತಿ, ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು ಎಂಬುದನ್ನು ಸಾರಿದವರು. ಆದ್ದರಿಂದ ನಾವು ಅವರ ಆಶಯದಂತೆ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, 12ನೇ ಶತಮಾನದಲ್ಲಿದ್ದ ಅಸಮಾನತೆಯ ವಿರುದ್ಧ ಹೋರಾಡಿ ಸಮಾಜದಲ್ಲಿದ್ದ ಮಡಿವಂತಿಕೆಯನ್ನು ನೋಡಿ ಮಹಾಮನೆ ಅನುಭವ ಮಂಟಪದ ಮೂಲಕ ಬದಲಾವಣೆಗೆ ಮುನ್ನುಡಿ ಬರೆದರು. ಬಸವೇಶ್ವರರ ಕರೆಗೆ ಜನ ಸಮುದಾಯ ಓಡೋಡಿ ಬರುತ್ತಿತ್ತು. ಬಸವಣ್ಣನವರ ಅನುಭವ ಮಂಟಪದಂತೆ ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪಿಐ ರೇವಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ವೀರಶೈವ ಲಿಂಗಾಯತ ರಾಜ್ಯ ಯುವ ಕಾರ್ಯದರ್ಶಿ ವಿಕ್ರಮ್ ಕೌರಿ, ಉಪಾಧ್ಯಕ್ಷ ಅರಣ್‌ಕುಮಾರ್, ಕಾರ್ಯದರ್ಶಿ ಮದನ್, ಮಹಿಳಾ ಘಟಕದ ಅಧ್ಯಕ್ಷೆ ವಿಂಪು, ವನಸಿರಿ ಉಮೇಶ್, ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯ ಸೇರಿದಂತೆ ಇತರರಿದ್ದರು.