ಸಂಶೋಧನೆಗಳು ಹೆಚ್ಚಿದರೂ ಮಾನವೀಯ ಮೌಲ್ಯ ಕುಸಿತ

19KMD-1
Published on

ಕೆ.ಎಂ.ದೊಡ್ಡಿ: ಪ್ರಸಕ್ತ ಕಾಲಮಾನದಲ್ಲಿ ಮಾನವೀಯ ಗುಣ-ಧರ್ಮಗಳ ಬದಲಾವಣೆಗಳು ಅಧಿಕವಾಗಿವೆ ಎಂದು ಮಣಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಟಿ.ಶ್ರೀನಿವಾಸ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಭಾರತೀ ಕಾಲೇಜಿನಲ್ಲಿ ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಭಾಗಿತ್ವದಲ್ಲಿ ಸಂಶೋಧನಾ ಕಾರ್ಯ ವಿಧಾನ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಹೊಸ ಸಂಶೋಧನೆಗಳು ಬಂದರೂ ಜನತೆ ತಮ್ಮ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ಸಂಶೋಧನಾ ಮನೋಭಾವನೆ ಹೊಂದುವುದರಿಂದ ತಮ್ಮ ಭವಿಷ್ಯದ ಬೆಳವಣಿಗೆಗೆ ಸಮರ್ಪಕವಾದ ಮಾರ್ಗವನ್ನು ಅಳವಡಿಸಿಕೊಳ್ಳಬಹುದು. ಪದವಿಗೆ ಮಾತ್ರ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ನೆಲೆಯಲ್ಲಿ ಸಾಧಿಸಬೇಕು ಎಂದು ತಿಳಿಸಿದರು.

ಭಾರತೀ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಪ್ರೊ.ಎಸ್.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಕಾರ್ಯಾಗಾರದ ಅನುಭವವನ್ನು ಸೀಮಿತಗೊಳಿಸದೆ ಭವಿಷ್ಯದಲ್ಲಿ ತಮ್ಮ ವೃತ್ತಿರಂಗದಲ್ಲಿ ಸುಧಾರಣೆಗಾಗಿ ಅಳವಡಿಸಿಕೊಳ್ಳುವುದು, ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿರುವ ಹಾಗೂ ಸಂಶೋಧನೆಯಲ್ಲಿ ತೊಡಗಿರುವ ಯುವ ಸಮೂಹ ಸಂಶೋಧನೆಗೆ ಅಗತ್ಯವಿರುವ ವ್ಯವಸ್ಥೆ, ಕಾರ್ಯ ವಿಧಾನವನ್ನು ಅಭ್ಯಸಿಸಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯ ಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ. ಸೋಮಶೇಖರ್, ಸಂಶೋಧನಾ ಸಮಸ್ಯೆಯ ಆಯ್ಕೆಯ ಕ್ರಮಾನುಗತ ಅನುಸರಣೆ, ಸಮಸ್ಯೆಯ ನಿರ್ದಿಷ್ಟ ವ್ಯಾಖ್ಯಾನ ಹಾಗೂ ಸಂಶೋಧನೆಗೆ ಅಗತ್ಯವಿರುವ ವಿಷಯ ಪೂರ್ವಜ್ಞಾನವನ್ನು ಹೊಂದಲು ಗ್ರಂಥಗಳ ಪರಾಮರ್ಶನೆಯ ಕ್ರಮಗಳು ಹಾಗೂ ಉಪಯೋಗಗಳನ್ನು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಚಂದ್ರಮೌಳಿ, ಸಂಶೋಧನೆಯಲ್ಲಿನ ಹೃದಯ ಭಾಗವಾಗಿರುವ ಮತ್ತು ಸಂಶೋಧನೆಯ ನೀಲಿನಕ್ಷೆಯಾಗಿರುವ ಸಂಶೋಧನಾ ವಿಧಾನದ ಹಂತಗಳು, ಪ್ರಮುಖಾಂಶಗಳು ಹಾಗೂ ಸಂಶೋಧನಾ ವಿಧಾನದ ರಚನೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಕೆ.ಆರ್.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿದ್ದಪ್ಪ ಮಾದರ್ ಅವರು, ಸಂಶೋಧನೆಯಲ್ಲಿ ದತ್ತಾಂಶಗಳ ವರ್ಗೀಕರಣ, ಕೋಷ್ಠೀಕರಣ, ಮಾಹಿತಿಯ ಪ್ರತಿಪಾದನೆ, ವಿಶ್ಲೇಷಣೆ ಹಾಗೂ ಸಾಂಖಿಕ ದತ್ತಾಂಶಗಳ ನಿರ್ವಹಣೆಯೊಂದಿಗೆ ಸಂಶೋಧನಾ ವರದಿ ತಯಾರಿಸುವಿಕೆಯನ್ನು ತಿಳಿಸಿಕೊಟ್ಟರು.

ಕಾರ್ಯಾಗಾರದಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ವಿಶ್ವ ವಿದ್ಯಾಲಯಗಳ ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಭಾರತೀ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಂಯೋಜಕ ಕೆ.ಸಿ.ಸುಂದರೇಶ್, ಐಕ್ಯೂಎಸಿ ಸಂಯೋಜಕರಾದ ಡಾ.ತೇಜೇಶ್ ಕುಮಾರ್, ಡಾ.ಪಿ.ಪುನೀತ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಎಂ.ಪಿ. ಅಭಿಷೇಕ, ಪ್ರಾಧ್ಯಾಪಕರಾದ ಎಚ್.ಎಸ್.ಮಂಜುನಾಥ್, ಎಂ.ಸಿ.ರಂಜೀತ್, ಎಸ್.ಗೀತಾ, ಕೆ.ಎನ್.ಪುಷ್ಪಶ್ರೀ, ಅಧ್ಯಾಪಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net