

ಕೆ.ಎಂ.ದೊಡ್ಡಿ: ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಹಿರಿಮೆ, ಗರಿಮೆ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ತಿಳಿಸಿದರು.
ಭಾರತೀ ಕಾಲೇಜು(ಸ್ವಾಯತ್ತ) ಕನ್ನಡ ವಿಭಾಗ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರ ಮಟ್ಟದ ಸಂಶೋಧನಾ ಅಂತರ್ಜಾಲ ಸಮ್ಮೇಳನದ ‘ಕನ್ನಡ ಸಾಹಿತ್ಯ-ಸಂಸ್ಕೃತಿ ಸಂಶೋಧನೆಯ ವಿಧಾನ ಮತ್ತು ಹೊಸ ಸಾಧ್ಯತೆಗಳು’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸಂಕಲ್ಪ ಮನೋಭಾವ ಇರಬೇಕು. ನಿಮ್ಮಲ್ಲಿ ದೃಷ್ಟಿ ಮತ್ತು ಸೃಷ್ಟಿ ಇದ್ದಾಗ ಕಲಿಕಾ ಮಟ್ಟ ಕ್ಷಣಿಸುವುದಿಲ್ಲ. ಸಂಶೋಧಕರು ಸಾಹಿತ್ಯ ವಲಯದಲ್ಲಿ ತಮ್ಮ ಆಯ್ಕೆ ಕ್ಷೇತ್ರದಲ್ಲಿ ಸುದೀರ್ಘವಾಗಿ ಅಧ್ಯಯನ ಮಾಡಿ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, ವಿಶ್ವವಿದ್ಯಾಲಯವು ಮಾಡುವ ಕೆಲಸವನ್ನು ಭಾರತೀ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಇಂತಹ ಸಮ್ಮೇಳನಗಳನ್ನು ಎಲ್ಲ ಸಂಶೋಧಕರು ಸದುಪಯೋಗಪಡಿಸಿಕೊಳ್ಳಿ. ಸಂಶೋಧಕನಿಗೆ ದೃಷ್ಟಿ ಸೂಕ್ಷ್ಮವಾಗಿದ್ದರೆ ಬೇಕಾದಷ್ಟು ಹೊಸ ವಿಚಾರಗಳು ದೊರೆಯುತ್ತದೆ ಎಂದು ತಿಳಿಸಿದರು.
ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜ್ ಮಾತನಾಡಿ, ಸಂಶೋಧನೆಯ ದೂರದೃಷ್ಟಿಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಯ ವಿವಿಧ ಆಯಾಯಗಳಲ್ಲಿ ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ಗೋಷ್ಠಿಯಲ್ಲಿ ತಿಳಿಸಿದ್ದು ಇದರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಡಾ.ಎಂ.ಜಿ.ಮಂಜುನಾಥ ಸಂಶೋಧನೆಯ ಸ್ವರೂಪ, ಸಂಶೋಧನೆಯಲ್ಲಿ ತಾತ್ವಿಕರಣದ ಮಹತ್ವ ಕುರಿತು ಪ್ರೊ.ರಹಮತ್ ತರೀಕೆರೆ, ಪ್ರೊ.ರಾಧಾಕೃಷ್ಣ ಎನ್.ಬೆಳ್ಳೂರು ಅವರು ಭಾಷೆ ಸಂಶೋಧನೆ ಉದ್ದೇಶ ಮತ್ತು ವಿನ್ಯಾಸ, ಪ್ರೊ.ಟಿ.ಎಸ್. ಸತ್ಯನಾಥ್ ಅವರು ಸಂಶೋಧನೆ ಕ್ರಮ ಮತ್ತು ಮಾಹಿತಿ, ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಸಂಶೋಧಕರ ಮುಂದಿನ ಸವಾಲುಗಳು ವಿಷಯಗಳ ಕುರಿತು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ-ಸಂಸ್ಕೃತಿ ಸಂಶೋಧನೆಯ ವಿಧಾನ ಮತ್ತು ಹೊಸ ಸಾಧ್ಯತೆಗಳು (ಸಂಶೋಧನಾ ಲೇಖನಗಳು) ಪುಸ್ತಕವನ್ನು ಡಾ.ಎಂ.ಜಿ.ಮಂಜುನಾಥ್ ಬಿಡುಗಡೆ ಮಾಡಿದರು. ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಡಾ.ಎಚ್.ಎಂ.ನಾಗೇಶ, ಡಾ.ಸಿ.ಮರಯ್ಯ, ತಾಂತ್ರಿಕ ಸಮಿತಿ ಮುಖ್ಯಸ್ಥ ಡಾ.ಕೆ.ಟಿ.ಗಣೇಶ್ ಡಾ.ಎಂ.ಪಿ.ತೇಜೇಶ್ ಕುಮಾರ್. ಎಂ.ಶ್ರೀಕಾಂತ್ ಡಾ.ಎ.ಸಿ.ನೂತನ್ ಬಿ.ಎಸ್.ಕೃಷ್ಣ, ಸಂಚಾಲಕರಾದ ಎಂ.ಮಮತಾ, ಡಾ.ಜಿ.ಎಂ.ಲಕ್ಷ್ಮೀ , ಡಿ.ಎಲ್.ಸರಿತಾ, ಬಿ.ಡಿ.ಮಹೇಶ, ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಜರಿದ್ದರು.