

ಹುಣಸೂರು: ದೇಶ, ಜನರ ಒಳಿತಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಹಳ ಜತನದಿಂದ ರಚಿಸಿರುವ ಸಂವಿಧಾನ ವಿಶ್ವದಲ್ಲೇ ವಿಶಿಷ್ಟವಾದುದು ಅಂತಹ ಸಂವಿಧಾನವನ್ನು ಕಳೆದುಕೊಳ್ಳುವ ಅಪಾಯವಿದ್ದು, ದೇಶದ ಅಸ್ಮಿತೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ ಹಾ.ರಾ.ಮಹೇಶ್ ಎಚ್ಚರಿಸಿದರು.
ನಗರಸಭೆ ಮೈದಾನದಲ್ಲಿ ಅಂಬೇಡ್ಕರರ 134ನೇ ಜಯಂತಿಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮಹಾನಾಯಕ ಅಂಬೇಡ್ಕರರು ಪರಿಶಿಷ್ಟರಿಗೆ ಮಾತ್ರ ಸಂವಿಧಾನ ರಚಿಸದೆ, ಸರ್ವ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಆದರೆ ಎಲ್ಲ ಸಮುದಾಯದ ಹೃದಯಗಳಲ್ಲೂ ಸೇರಿರುವ ಅಂಬೇಡ್ಕರರ ಬಗ್ಗೆ ಇಂದಿಗೂ ಪರಿಶಿಷ್ಟರಿಗೆ ಮಾತ್ರ ಅಂಬೇಡ್ಕರ್ ಎನ್ನುವ ಪ್ರವೃತ್ತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಬುದ್ಧ, ಬಸವ, ಕನಕದಾಸರು, ಜ್ಯೋತಿಬಾ ಫುಲೆ, ಕುದ್ಲಾಲ್ರಂಗರಾವ್, ಕುವೆಂಪು ಸೇರಿದಂತೆ ಅನೇಕ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿಯಾಗಿದ್ದು, ಸಂವಿಧಾನ ಅಸ್ಮಿತೆಗೆ ಧಕ್ಕೆ ಬರುವ ಅಪಾಯವಿದೆ.
ಉದ್ಯೋಗ ಸ್ವಾತಂತ್ರ್ಯದ ಹೋರಾಟ: 1935ರಲ್ಲೇ ಉದ್ಯೋಗ ಸ್ವಾತಂತ್ರ್ಯಕ್ಕಾಗಿ ದುಂಡು ಮೇಜಿನ ಸಭೆಯಲ್ಲಿ ಹಕ್ಕು ಮಂಡಿಸಿ, ಗೆಲುವು ಪಡೆದಿದ್ದ ಅಂಬೇಡ್ಕರ್ 1950ರಲ್ಲಿ ರಚನೆಗೊಂಡ ಸಂವಿಧಾನಕ್ಕೆ ಅಪಾಯವಿದೆ ಎಂದು ಅಂದೆ ಹೇಳಿದ್ದರು. ಶಿಕ್ಷಣ, ಮತದಾನ ಹಕ್ಕು, ಸಮಾನತೆ ಕಲ್ಪಿಸಿದ, ಅಂಬೇಡ್ಕರ್ ಜಯಂತಿಯನ್ನು ವರ್ಷಪೂರ್ತಿ ಆಚರಿಸುವ ಮಹಾನಾಯಕ, ವಿಶ್ವಜ್ಞಾನಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಅಂಬೇಡ್ಕರ್ ನೀಡಿರುವ ಸಂವಿಧಾನ ಇಲ್ಲದಿದ್ದರೆ ಏನನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹನೀಯನ ಜಯಂತಿಯನ್ನು ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ಆಚರಿಸಲಾಗಿದೆ ಎಂದರು.
ಅಂಬೇಡ್ಕರರ ಪುತ್ಥಳಿಯನ್ನು ನಗರದ ಹೃದಯ ಭಾಗದಲ್ಲಿ ನಿರ್ಮಾಣ, ಬಾಚಳ್ಳಿ ರಸ್ತೆಯ ಬಳಿ ಬುದ್ಧ ವಿಹಾರ ಕೇಂದ್ರ ನಿರ್ಮಿಸಲು ಮತ್ತು ಕಟ್ಟೆಮಳಲವಾಡಿಯಲ್ಲಿ ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪಿಸಲು ಕಟಿಬದ್ಧನಾಗಿದ್ದೇನೆಂದು ಪ್ರಕಟಿಸಿದರು.
ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹರಿಹರಾನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಮಂಜುನಾಥ್, ಜಯರಾಂ, ಮುಖಂಡರಾದ ನಿಂಗರಾಜ ಮಲ್ಲಾಡಿ, ಹರವೆ ಶ್ರೀಧರ್, ಸತೀಶ್ ಪಾಪಣ್ಣ, ಬಿಳಿಕೆರೆ ಮಧು, ಇಒ ಹೊಂಗಯ್ಯ ಮಾತನಾಡಿದರು. ಅನೇಕ ಗಣ್ಯರು ವೇದಿಕೆಯಲ್ಲಿದ್ದರು.