ಸಂವಹನ ಕೌಶಲ ತರಬೇತಿ ಅಗತ್ಯ ಸಿಯುಕೆ ಕುಲಪತಿ ಅಭಿಮತ

Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾಷಾ ಪ್ರಯೋಗಾಲಯ ಬರವಣಿಗೆ, ಓದುವಿಕೆ ಮತ್ತು ಆಲಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ ತೀಕ್ಷö್ಣಗೊಳಿಸಲು ತರಬೇತಿ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ಇಂಗ್ಲಿಷ ವಿಭಾಗದಲ್ಲಿ ಭಾಷೆ ಮತ್ತು ಚಲನಚಿತ್ರ ಪ್ರಯೋಗಾಲಯ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಥೆ ಬರವಣಿಗೆ, ಕಥೆ ಬರೆಯುವಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಫಿಲ್ಮ್ಲ್ಯಾಬ್ ನೆರವಾಗುವಂತಿರಬೇಕು. ಇಂಗ್ಲಿಷ ವಿಭಾಗವು ಸಾಹಿತ್ಯ ಕಲಿಸುವ ಜತೆಗೆ ಭಾಷೆ ಕಲಿಸಬೇಕು. ಭಾಷೆ ತಿಳಿಯದ ಹೊರತು ಸಾಹಿತ್ಯ ಅರ್ಥವಾಗುವುದಿಲ್ಲ ಎಂದರು.
ನಮ್ಮನ್ನು ಕೇವಲ ಒಂದು ಭಾಷೆಗೆ ಸೀಮಿತಗೊಳಿಸಿಕೊಳ್ಳದೆ ಅನೇಕ ಭಾಷೆ ಕಲಿಯಬೇಕು. ರಾಜಕಾರಣಿಗಳು ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ ಎಂದರು.
ಇAಗ್ಲಿಷ ವಿಭಾಗದ ಮುಖ್ಯಸ್ಥ ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ಬಸವರಾಜ ಡೋಣೂರ್ ಮಾತನಾಡಿ, ಭಾರತೀಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ ಒಂದು ಭಾಷೆಯಾಗಿ ಕಲಿಸುವುದು  ಸವಾಲಾಗಿದೆ. ಭಾರತೀಯ ತರಗತಿಗಳು ಅತ್ಯಂತ ವೈವಿಧ್ಯಮಯವಾಗಿದ್ದು, ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಮಟ್ಟಗಳೆರಡರಲ್ಲೂ ಅಡೆತಡೆ ಹೊಂದಿರುತ್ತಾರೆ. ಹೀಗಾಗಿ ಅನೇಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ ಕಲಿಸಲು ಶಿಕ್ಷಕರಿಗೆ ಸಮರ್ಪಕ ತರಬೇತಿ ನೀಡಬೇಕು. ನಮ್ಮ ವಿವಿ ಇಂಗ್ಲಿಷ ವಿಭಾಗವು ಬರವಣಿಗೆ, ಓದುವಿಕೆ ಮತ್ತು ಆಲಿಸುವಿಕೆಯಂತಹ ಭಾಷಾ ಕೌಶಲ ಕಲಿಸಲು ಬದ್ಧವಾಗಿದೆ. ಧ್ವನಿಯನ್ನು ಮಾಡ್ಯುಲೇಟ್ ಮಾಡಲು ಮತ್ತು ಪದಗಳನ್ನು ಸರಿಯಾಗಿ ಉಚ್ಚರಿಸಲು ವಿದ್ಯಾರ್ಥಿಗಳಿಗೆ ಲ್ಯಾಂಗ್ವೇಜ್ ಲ್ಯಾಬ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲು, ಕಿರುಚಿತ್ರ ಮತ್ತು ಸಾಕ್ಷಚಿತ್ರ ಮಾಡಲು ವಿದ್ಯಾರ್ಥಿಗಳು ಈ ಲ್ಯಾಬ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದರು.
ಡಾ.ಆಶಿಶ್ ಬೆಳಮ್‌ಕರ್ ನಿರೂಪಿಸಿದರು, ಮಹೇಂದ್ರ ಸ್ವಾಗತಿಸಿದರು, ಡಾ.ಪ್ರಕಾಶ್ ಬಾಳಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net