

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಸೋಮವಾರ ಸರಳವಾಗಿ ನಾಮಪತ್ರ ಸಲ್ಲಿಸಿದ್ದು, ಮತ್ತೊಮ್ಮೆ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಗಮನಿಸಿರುವ ಮತದಾರರು ನಿಶ್ಚಿತವಾಗಿ ಸಂಯುಕ್ತ ಪಾಟೀಲ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಸತತವಾಗಿ 20 ವರ್ಷ ಸಂಸತ್ ಸದಸ್ಯರಾಗಿರುವ ಪಿ.ಸಿ. ಗದ್ದಿಗೌಡರ್ ಬಾಗಲಕೋಟ ಅಭಿವೃದ್ಧಿಗೆ ಪ್ರಯತ್ನ ಮಾಡಲಿಲ್ಲ. ಕುಡಚಿ ಬಾಗಲಕೋಟೆ ರೈಲ್ವೆ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಾವುದೆ ಉದ್ಯಮವನ್ನು ಜಿಲ್ಲೆಗೆ ತರಲು ಪ್ರಯತ್ನ ಮಾಡಲಿಲ್ಲ ಎಂದು ಟೀಕೆ ಮಾಡಿದರು.
ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಕೇಂದ್ರದ ಅನುದಾನ ತಂದು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಗದ್ದಿಗೌಡರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ ಎಂದರು.
ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಎಂ.ಬಿ. ಸೌದಾಗಾರ್ ಇದ್ದರು.