

ಬಾಗಲಕೋಟೆ: ಸಂಯುಕ್ತ ಪಾಟೀಲ ಅವರು ತಂದೆ, ಸಚಿವ ಶಿವಾನಂದ ಪಾಟೀಲರ ಪ್ರಭಾವದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶ ಪಡೆದಿಲ್ಲ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ವಹಿಸಿದ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಘಟಕದಲ್ಲಿ ಕೆಲಸ ಮಾಡಿದ್ದಾರೆ. ನಾಯಕತ್ವದ ಗುಣ ಹೊಂದಿರುವ ಸಂಯುಕ್ತ ಪಾಟೀಲ ಅವರಂಥ ಕಾನೂನು ಪದವೀಧರೆ ಸಂಸತ್ತಿಗೆ ಆಯ್ಕೆಯಾದರೆ ರಾಜ್ಯಕ್ಕೆ ನ್ಯಾಯ ಒದಗಿಸಬಲ್ಲರು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಹೇಳಿದರು.
ಬೀಳಗಿ ಪಟ್ಟಣದಲ್ಲಿ ಶುಕ್ರವಾರ ರ್ಯಾಲಿ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸತತ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪಿ.ಸಿ. ಗದ್ದಿಗೌಡರ್ ತಮ್ಮ ಕ್ಷೇತ್ರ ಅಥವಾ ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ನಮ್ಮ ಪರವಾಗಿ ಮಾತನಾಡುವವರು ಸಂಸತ್ತಿನಲ್ಲಿ ಇರಬೇಕು. ಹೀಗಾಗಿ ಈ ಬಾರಿ ಸಂಯುಕ್ತ ಪಾಟೀಲ ಅವರನ್ನು ಅಧಿಕ ಬಹುಮತದಿಂದ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆಗೆ ಬದಲಾವಣೆಯ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ನಿಮಗೆ ನೀಡಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಯುಕ್ತ ಪಾಟೀಲ ಅವರು ಅಪಾರ ಕನಸು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಏನೇನು ಮಾಡಬೇಕು ಎಂಬ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ನಿಶ್ಚಿತ. ಜಾತಿವಾರು ಸಮಾಜವನ್ನು ವಿಭಜನೆ ಮಾಡುತ್ತಾರೆ. ಸಂವಿಧಾನ ತಿದ್ದುಪಡಿಯ ಮಾತುಗಳನ್ನು ಆಡುತ್ತಿದ್ದಾರೆ. ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ದೇಶ ಮತ್ತು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ಮೋದಿ ಅವರ ಹತ್ತು ವರ್ಷಗಳ ಅವಧಿಯಲ್ಲಿ ಹಲವು ಹಗರಣಗಳು ನಡೆದಿದ್ದರೂ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿಲ್ಲ. ದೃಶ್ಯವಾಹಿನಿಗಳಲ್ಲಿ ಚರ್ಚೆ ನಡೆಯುತ್ತಿಲ್ಲ. ಮೋದಿ ಅವರು, ನಾನೂ ತಿನ್ನುವುದಿಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಭ್ರಷ್ಟರಿಗೆ ಐಟಿ, ಇಡಿ ದಾಳಿ ಬೆದರಿಕೆ ಹಾಕಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಈಗಾಗಲೇ ಒಂದು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಆಮಿಷವೊಡ್ಡಿ ಕಾಂಗ್ರೆಸ್, ಬಿಎಸ್‌ಪಿ ಸೇರಿದಂತೆ ನಾಮಪತ್ರ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳ ನಾಮಪತ್ರ ವಾಪಸ್ ತೆಗೆಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪ್ರಜಾಪ್ರಭುತ್ವ ಎಲ್ಲಿಗೆ ಬಂದು ನಿಲ್ಲಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಜೆ.ಟಿ. ಪಾಟೀಲ ಅವರು ಮಾತನಾಡಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಬೀಳಗಿ ಪಟ್ಟಣಕ್ಕೆ ಪ್ರತಿದಿನ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಾಗಲಿದೆ. ಇದುವರೆಗೆ ಬೀಳಗಿ ಪಟ್ಟಣದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು.ನಾನು ಶಾಸಕನಾದ ನಂತರ ಈಗ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯ ವ್ಯವಸ್ಥೆ ಮಾಡಿದ್ದೇನೆ. ಭವಿಷ್ಯದ ದಿನಗಳಲ್ಲಿ ಪ್ರತಿದಿನ ನೀರು ಸಿಗಲಿದೆ ಎಂದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಏಳು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸಿದರೆ ಮತ್ತಷ್ಟು ಕ್ಷೇತ್ರಕ್ಕೆ ಅನುದಾನ ತರಲು ಶಕ್ತಿ ಸಿಗಲಿದೆ ಎಂದರು.
ಪಕ್ಷದ ಮುಖಂಡರಾದ ಪ್ರವೀಣಗೌಡ ಪಾಟೀಲ, ರಾಮನಗೌಡ ಜಕ್ಕನಗೌಡ, ಎಸ್.ಟಿ. ಪಾಟೀಲ, ಆಶಾ ಬೀಳಗಿ, ಸಂಗಪ್ಪಣ್ಣ ಮತ್ತಿತರರು ವೇದಿಕೆಯಲ್ಲಿದ್ದರು. ಸಭೆಗೂ ಮುನ್ನ ಬೀಳಗಿ ಪಟ್ಟಣದಲ್ಲಿ ರ್ಯಾಲಿ ನಡೆಯಿತು. ಅಂಬೇಡ್ಕರ್, ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ದುಪ್ಟಟ್ಟಾಗಿದ್ದು ಆದಾಯವಲ್ಲ, ಖರ್ಚು
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕರ ಆದಾಯವನ್ನುದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. ಆದರೆ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಿಗೆ ವೆಚ್ಚಗಳು ದುಪ್ಪಟ್ಟಾಗಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.
ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅತಿ ಹೆಚ್ಚು ಸಾಲ ಮಾಡಿದ ಪ್ರಧಾನಿ ಎಂಬ ಅಪಖ್ಯಾತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. 130 ಲಕ್ಷ ಕೋಟಿ ರೂ. ಸಾಲ ಮಾಡಿದರೂ ರೈತರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಶ್ರೀಮಂತ ಉದ್ದಿಮೆದಾರರ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇ ಮೋದಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಹಲವುಬಿಜೆಪಿ ಮುಖಂಡರು ಗೇಲಿಮಾಡಿದರು. ಆದರೆ ಈ ಗ್ಯಾರಂಟಿ ಯೋಜನೆಗಳಿಂದ ಅನೇಕ ಬಡ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಶ್ರೀಮಂತರ ಪರವಾಗಿರುವವರಿಗೆ ಬಡವರ ಕಷ್ಟಗಳೇನು ಎಂಬುದು ಅರಿವಿಲ್ಲ ಎಂದು ಟೀಕಿಸಿದರು.