ಸಂಭ್ರಮವಿಲ್ಲದ ನಾಗರ ಪಂಚಮಿ

25KWR-8
Published on

ಕಾರವಾರ: ಜಿಲ್ಲೆಯ ವಿವಿಧೆಡೆ ನಾಗರ ಪಂಚಮಿಯನ್ನು ಶನಿವಾರ ಆಚರಿಸಲಾಯಿತು. ನಾಗರ ಕಟ್ಟೆಗಳಲ್ಲಿ ವರ್ಷಗಳಷ್ಟು ಜನಸಂದಣಿ, ಸಂಭ್ರಮ ಇರಲಿಲ್ಲ.

ಕಾರವಾರದ ವಿವಿಧೆಡೆ ನಾಗರ ಕಟ್ಟೆಗಳಲ್ಲಿ ಬೆಳಗ್ಗೆಯೇ ಪೂಜೆ ಮಾಡಿ ಬಾಗಿಲು ಹಾಕಲಾಗಿತ್ತು. ಜನ ಹೊರಗಿನಿಂದಲೇ ಹಾಲಿನ ಪ್ಯಾಕೆಟ್​ಗಳನ್ನ ಇಟ್ಟು, ಊದಿನ ಕಡ್ಡಿ ಹಚ್ಚಿ ನಮಿಸಿದ್ದು ಕಂಡುಬಂತು. ನಂದನಗದ್ದಾದ ಪ್ರಸಿದ್ಧ ನಾಗನಾಥ ದೇವಸ್ಥಾನದಲ್ಲಿಯೂ ಭಕ್ತರ ಪೂಜೆಗೆ ಅವಕಾಶವಿರಲಿಲ್ಲ. ಬೆಳಗ್ಗೆಯೇ ಪೂಜೆ ಮಾಡಿ ಬಾಗಿಲು ಹಾಕಲಾಗಿತ್ತು. ಹೊರಗಡೆ ಇರುವ ನಾಗರ ಕಲ್ಲಿಗೆ ಹಲವರು ಹಾಲು ಎರೆದರು.

ಅಂಕೋಲಾದ ಉರಗ ಪ್ರೇಮಿ ಮಹೇಶ ನಾಯ್ಕ ಅವರು ನಾಗರ ಪಂಚಮಿಯ ದಿನ ನಿಜ ನಾಗರ ಹಾವಿಗೆ ಪೂಜೆ ಸಲ್ಲಿಸಲು ಭಕ್ತರಿಗೆ ಅನುವು ಮಾಡಿಕೊಟ್ಟರು. ಮೊದಲೇ ಹಿಡಿದಿದ್ದ ಹಾವೊಂದನ್ನು ಅಂಕೋಲಾ ಅವರ್ಸಾದ ಭೂ ದೇವಿ ದೇವಸ್ಥಾನ ಸಮೀಪ ಇರುವ ನಾಗರ ಕಟ್ಟೆಯಲ್ಲಿ ಬಿಟ್ಟು, ಪೂಜೆ ಸಲ್ಲಿಸಲು ಅವಕಾಶಕೊಟ್ಟರು. ಹಾವು ನಾಗರ ಕಟ್ಟೆಯ ಪಕ್ಕ ಹೆಡೆ ಎತ್ತಿ ನಿಂತು ಪೂಜೆ ಸ್ವೀಕರಿಸಿತು. ಹಾವುಗಳು ರೈತರ ಸ್ನೇಹಿಯಾಗಿವೆ. ಹುಳು, ಹುಪ್ಪಡಿ, ಇಲಿಗಳನ್ನು ಹಿಡಿದು ಬೆಳೆ ರಕ್ಷಣೆ ಮಾಡುತ್ತವೆ. ಅವುಗಳನ್ನು ಹೊಡೆಯದಿರಿ ಎಂದು ಜಾಗೃತಿ ಮೂಡಿಸಿದರು.

ವಿಶೇಷ ಅಡುಗೆ ತಯಾರಿಸಿ ಸಂಭ್ರಮ: ಶಿರಸಿ: ನಾಗರ ಪಂಚಮಿ ಹಬ್ಬವನ್ನು ತಾಲೂಕಿನೆಲ್ಲೆಡೆ ನಾಗ ಮೂರ್ತಿಗೆ ಹಾಲೆರೆಯುವ ಮೂಲಕ ಸಡಗರದಿಂದ ಆಚರಿಸಲಾಯಿತು. ಆಸ್ತಿಕರು ಹತ್ತಿರದ ನಾಗ ಬನಕ್ಕೆ ತೆರಳಿ ಪೂಜೆ ಸಮರ್ಪಿಸಿದರು. ಕುಟುಂಬ ಸದಸ್ಯರೆಲ್ಲ ಸೇರಿ ವಿಶೇಷ ಅಡುಗೆ ತಯಾರಿಸಿ ಹಬ್ಬದ ಸವಿ ಊಟ ಸವಿದರು.

ಉರಗ ರಕ್ಷಕ ಪ್ರಶಾಂತ ಹುಲೇಕಲ್ ಅವರು ನಿಜ ನಾಗರನಿಗೆ ಹಾಲೆದು ಭಜಿಸಿದರು. ಉರಗ ಲೋಕದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಾಂತ ಹುಲೇಕಲ್ ಕುಟುಂಬದ ಸದಸ್ಯರು ನಾಗರ ಹಾವನ್ನು ತಂದು ಹೂ, ಅಕ್ಷತೆ, ಹಣ್ಣುಕಾಯಿ ಅರ್ಪಿಸಿದರು.

ಅರ್ಚಕರಿಂದ ಪೂಜೆ: ಪ್ರತಿ ವರ್ಷ ನಗರದ ಸುಬ್ರಹ್ಮಣ್ಯ ದೇವಾಲಯ ಸೇರಿ ಇತರ ದೇವಾಲಯಗಳಲ್ಲಿ ಕೋವಿಡ್ ಕಾರಣಕ್ಕೆ ಮುನ್ನೆಚ್ಚರಿಕೆಗಾಗಿ ಸಾರ್ವಜನಿಕರಿಂದ ಪೂಜೆ, ಸೇವೆ, ಅರ್ಚನೆ ನಿರ್ಬಂಧಿಸಲಾಗಿತ್ತು. ದೇವಾಲಯಗಳ ಅರ್ಚಕರೇ ಸ್ವತಃ ಪೂಜೆ ನೆರವೇರಿಸಿ ಪಂಚಮಿ ಪೂಜೆ ಮಾಡಿದರು.

ನಾಗೇಶ್ವರನಿಗೆ ಸರ್ವಾಲಂಕಾರ: ಗೋಕರ್ಣದ ಪುರಾಣ ಪ್ರಸಿದ್ಧ ನಾಗೇಶ್ವರ ಮಂದಿರದಲ್ಲಿ ನಾಗಪಂಚಮಿ ನಿಮಿತ್ತ ನಾಗೇಶ್ವರಲಿಂಗಕ್ಕೆ ವಿಶೇಷ ಪೂಜಾಭಿಷೇಕ ಕೈಗೊಂಡು ಸರ್ವಾಲಂಕಾರ ಮಾಡಲಾಯಿತು.ಈ ದಿನ ಸಾವಿರಾರು ಭಕ್ತರು ನಾಗೇಶ್ವರಲಿಂಗಕ್ಕೆ ಮುಟ್ಟಿ ಪೂಜೆ ಸಲ್ಲಿಸಿ ಹಾಲೆರೆಯುವ ಪದ್ಧತಿಯಿತ್ತು. ಕರೊನಾ ಆತಂಕದ ಹಿನ್ನೆಲೆಯಲ್ಲಿ ಸಾರ್ವಜನಿಕ ಪೂಜೆಯನ್ನು ನಿರ್ಬಧಿಸಲಾಗಿತ್ತು.ಆದರೂ ಭಕ್ತರು ಮಂದಿರಕ್ಕೆ ಬಂದು ಮಂದಿರದ ಎದುರಿನ ಪುರಾತನ ಅಶ್ವತ್ಥ ವೃಕ್ಷಕ್ಕೆ ಹಾಲೆರೆದು ನಾಗೇಶ್ವರ ದರ್ಶನ ಪಡೆದು ನಾಗಪಂಚಮಿ ಆಚರಿಸಿದರು.

ಶ್ರೀನಾಗಯಕ್ಷೇಗೆ ಭಕ್ತಿ ಅರ್ಪಣೆ: ಭಟ್ಕಳ ಮಣ್ಕುಳಿಯ ಶ್ರೀನಾಗಯಕ್ಷೇ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಯಿತು. ನಾಗದೇವರಿಗೆ ಕ್ಷೀರಾಭಿಷೇಕ, ಎಳನೀರು, ಹರಸಿನ ಅಭಿಷೇಕ, ಪವಮಾನ ಮತ್ತು ಇತರ ಸೇವೆಗಳನ್ನು ಆಡಳಿತ ಮಂಡಳಿ ವತಿಯಿಂದ ನಡೆಸಲಾಯಿತು. ತಾಲೂಕಿನ ಬೆಳಲಖಂಡದ ಮೂರುಬಾಗಿಲ ನಾಗದೇವಸ್ಥಾನ, ಮುರ್ಡೆಶ್ವರದ ನಾಗದೇವಸ್ಥಾನಗಳಲ್ಲಿ, ಗ್ರಾಮೀಣದಲ್ಲಿಯೂ ನಾಗದೇವರಗೆ ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net