ಸಂಭ್ರಮದಿಂದ ಸಾಗಿದ ಬನಶಂಕರಿ ಮಹಾರಥೋತ್ಸವ‌

20240125_183127
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ‌ ಸುಪ್ರಸಿದ್ದ ಶಕ್ತಿಪೀಠ ಬನಶಂಕರಿ ದೇವಿ ಜಾತ್ರೆ ಹಿನ್ನಲೆ ಬನದ ಹುಣ್ಣಿಮೆಯ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಹಾರಥೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ: ಉತ್ತರ ಕರ್ನಾಟಕದ ಸುಪ್ರಸಿದ್ದ, ಶಕ್ತಪೀಠ, ಬನದ ತಾಯಿ ಬಾದಾಮಿ ಬನಶಂಕರಿ ದೇವಿಯ ಜಾತ್ರೆ ಗುರುವಾರ ಸಂಜೆ ಸಹಸ್ರಾರು ಭಕ್ತರ ಶಂಭುಕೋ ಘೋಷಣೆ ನಡುವೆ ಸಂಭ್ರಮ ಸಡಗರದಿಂದ ನಡೆಯಿತು.

ಪ್ರತಿ ವರ್ಷ ಬನದ ಹುಣ್ಣಿಮೆಯ ದಿನ ಆರಂಭವಾಗುವ ಬನಶಂಕರಿ ಜಾತ್ರೆ ಭರ್ತಿ ಒಂದು ತಿಂಗಳು ಕಾಲ ಭಕ್ತಿ, ಮನರಂಜನೆ ಹಾಗೂ ಸಾಂಸ್ಕೃತಿಕ ಸಮ್ಮಿಲನದ ಜಾತ್ರೆ ಎಂದೇ ಪ್ರಸಿದ್ದವಾಗಿದೆ. 

ಗುರುವಾರ ಸಂಜೆ ದೇವಸ್ಥಾನದ ರಥದ ಆವರಣದಲ್ಲಿ ರಥೋತ್ಸವ ಸಾಗುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ಸಂಭ್ರಮಿಸಿದರು. 

ಬಾಗಲಕೋಟೆ ಜಿಲ್ಲೆ ಸೇರಿ ಹೊರ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಜಾತ್ರೆಯ ಮಹಾರಥೋತ್ಸವವನ್ನು ಸಾಕ್ಷಿಕರಿಸಿದರು. 

ಜಾತ್ರೆಯ ಹಿನ್ನೆಲೆ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವೊಗೆ ಅಲಂಕಾರ, ಹೋಮ, ಹವನ ನಡೆದವು. 

ಜಾತ್ರೆಯ ಹಿನ್ನಲೆ ಈಗಾಗಲೇ ಮೂರ್ನಾಲ್ಕು ದಿನಗಳಿಂದಲೇ ಜಿಲ್ಲೆಯ ವಿವಿಧ ಕಡೆಯಿಂದ ಹತ್ತಾರು ಸಾವಿರ ಭಕ್ತರು ಬನಶಂಕರಿಯಲ್ಲಿ ವಾಸ್ತವ್ಯ ಇದ್ದು, ಗುರುವಾರ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. 

ನಸುಕಿನ ಜಾವದಿಂದಲೇ ದೇವಿ ದರ್ಶನಕ್ಕೆ ಭಕ್ತರು ಸರದಿಯಲ್ಲಿ ನಿಂತಿದ್ದರು. ಇಡೀ ದಿನ ದೇವಸ್ಥಾನದ ಆವರಣ ಭಕ್ತರಿಂದ ತುಂಬಿ ತುಳಕುತ್ತಿತ್ತು. ಗಂಟೆಗಟ್ಟಲೇ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದರು. ಹರಿದು ಬರ್ತಿದ್ದ ಭಕ್ತರನ್ನ ನಿಯಂತ್ರಿಸಲು ಪೊಲೀದರು ಹರಸಾಹಸ ಪಡುವಂತಾಯಿತು.

ಸಂಜೆ ರೋಣ ತಾಲೂಕಿನ ಮಾಡಲಗೇರಿಯಿಂದ ಎತ್ತಿನ ಬಂಡಿಯಲ್ಲಿ ತೇರಿನ ಹಗ್ಗವನ್ನು ಮಲಪ್ರಭಾ ನದಿ ದಾಟಿಕಡು ಮೆರವಣಿಗೆ ಮೂಲಕ ಬನಶಂಕರಿಗೆ ತಂದರು. ದೇವಸ್ಥಾನದಿಂದ ಅರ್ಚಕರು ಪಲ್ಲಕ್ಕಿಯನ್ನು ಮಂತ್ರ ಘೋಷಗಳನ್ನು ಹೇಳುತ್ತ ತೇರಿನ ಸ್ಥಳಕ್ಕೆ ಆಗಮಿಸಿದರು. ತೇರಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಸಂಜೆ 5 ಗಂಟೆ 5 ನಿಮಿಷಕ್ಕೆ ಮಹಾರಥೋತ್ಸವ ಸರಾಗವಾಗಿ ನಡೆಯಿತು. 

ಜಾತ್ರೆಯ ಹಿನ್ನಲೆಯಲ್ಲಿ ಬನಶಂಕರಿಯಲ್ಲಿ ಹತ್ತು  ಕಂಪನಿಗಳು ನಾಟಕ ಪ್ರದರ್ಶನ ಆರಂಭಿಸಿವೆ. ವಿವಿಧ ಅಂಗಡಿ, ಮುಂಗಟ್ಟುಗಳಲ್ಲಿ ಭರ್ಜರಿ ವಹಿವಾಟು ಆರಂಭವಾಗಿದೆ. 

ಕರೊನಾ ಕಾರಣದಿಂದ ಎರಡ್ಮೂರು ವರ್ಷ ಜಾತ್ರೆ ಸಂಭ್ರಮ ಕಳೆಗುಂದಿತ್ತು. ಈ ವರ್ಷ ಅತ್ಯಂತ ಸಂಭ್ರಮ ಸಡಗರದಿಂದ ಜಾತ್ರೆ ಆರಂಭವಾಗಿದೆ. ಕಲಾವಿದರ ಕಾಶಿ ಎಂದೇ ಕರೆಯಲ್ಪಡುವ ಬನಶಂಕರಿ ಜಾತ್ರೆಯಲ್ಲಿ‌ ಕಲಾವಿದರ ದಂಡೇ ಆಗಮಿಸಿ, ಭರ್ಜರಿ ಪ್ರದರ್ಶನವನ್ನ ಕೊಡುತ್ತಿದ್ದಾರೆ. ಹತ್ತು ನಾಟಕ ಕಂಪನಿಗಳು ಇವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net