

ಹಂಪಾಪುರ: ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿ ಹೊಮ್ಮರಗಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ ಸೋಮವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಭಾನುವಾರ ರಾತ್ರಿ 9.30ಕ್ಕೆ ಪ್ರಾರಂಭಗೊಂಡ ಅಮ್ಮನವರ ಚಂದ್ರಮಂಡಲ ವಾಹನ ಕಪಿಲಾ ನದಿಗೆ ತೆರಳಿ ಹೋಮ, ಹವನಾದಿಗಳನ್ನು ನೆರವೇರಿಸಲಾಯಿತು. ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿ ದೇವರನ್ನು ಅಲಂಕರಿಸಿ ಉಯ್ಯಲೆ ಆಡಿಸುತ್ತಾ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಜೈಕಾರ ಹಾಕುತ್ತಾ ರಥವನ್ನು ಎಳೆದರು. ಕಪಿಲಾ ನದಿಯಿಂದ ರಥವನ್ನು ಎಳೆದು ತಂದು ದೇವಾಲಯದ ಬಳಿ ನಿಲ್ಲಿಸಿದರು. ಬೆಳಗಿನ ಜಾವ ನಾಲ್ಕು ಗಂಟೆಗೆ ದೇವಸ್ಥಾನದ ಮುಂಭಾಗ ಬಾಣ ಬಿರುಸುಗಳ ಪ್ರದರ್ಶನ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮೆರವಣಿಗೆ ತಮಟೆ, ವಾದ್ಯ, ಭಜನಾ ಮೇಳಗಳೊಡನೆ ನಡೆಯಿತು. ಸೋಮವಾರ ಉತ್ಸಹ ಮೂರ್ತಿಗಳ ಮೆರವಣಿಗೆ ಮುಗಿದ ನಂತರ ಮಹಿಳೆಯರು ದೇವರಿಗೆ ತಂಬಿಟ್ಟು, ಆರತಿ ಮತ್ತು ಹಣ್ಣು, ಕಾಯಿ ನೈವೇದ್ಯ ನೀಡಿ ಪೂಜೆ ಸಲ್ಲಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಜನರಿಗೆ ಪ್ರಸಾದ ವಿನಿಯೋಗ, ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.