

ಕಾರವಾರ: ಮಾಜಾಳಿಯಲ್ಲಿ ಸೋಮವಾರ ‘ಅಯ್ಯಯ್ಯಯ್ಯೋ…ಯೋ ಬಂಡಿ ಯೋ’ ಎಂಬ ಕೂಗು ಕೇಳಿ ಬಂತು. ಕನಕಾಂಬರ ಮಾಲೆ ಸುತ್ತಿದ ಬಂಡಿಗಳನ್ನು ನೂರಾರು ಯುವಕರು ಭಕ್ತಿಯ ಪರಾಕಾಷ್ಠೆಯಲ್ಲಿ ಈ ಘೊಷದೊಂದಿಗೆ ಎಳೆದರೆ, ಅದರ ಮುಂದೆ ಹೊಟ್ಟೆಗೆ ಸೂಜಿ, ದಾರ ಪೋಣಿಸಿಕೊಂಡ ಬಾಲಕರು, ತಲೆಯ ಮೇಲೆ ದೀಪ ಹೊತ್ತ ಮಹಿಳೆಯರು ಸಾಗಿದರು.
ಇದು ಮಾಜಾಳಿಯ ದಾಡ ದೇವರ ಜಾತ್ರೆ ‘ಮಾರ್ಕೆ ಪುನವ್’ನ ಚಿತ್ರಣ. ಈ ಜಾತ್ರೆ ಹಲವು ವಿಶಿಷ್ಟ ಆಚರಣೆಗಳನ್ನು ಒಳಗೊಂಡಿದೆ. ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳು ಇಲ್ಲಿ ವಿಭಿನ್ನ ಸ್ವರೂಪದ ಹರಕೆಗಳನ್ನು ಒಪ್ಪಿಸುತ್ತಾರೆ.
ಶೆರ್ವಾನಿ ಧರಿಸಿ ಟೋಪಿ ಹಾಕಿಕೊಂಡು ಅದಕ್ಕೆ ಕನಕಾಂಬರ ಹೂವು ಸಿಕ್ಕಿಸಿಕೊಂಡು, ಕೈಯಲ್ಲಿ ಚಾಮರ ಹಿಡಿದ 30 ಕ್ಕೂ ಹೆಚ್ಚು ಬಾಲಕರು ಸೋಮವಾರ ಬೆಳಗ್ಗೆ ದಾಡ ದೇವಸ್ಥಾನದ ಬಾಗಿಲಲ್ಲಿ ನಿಂತಿದ್ದರು. ಪೂಜಾರಿ ಬಾಲಕರ ಹುಕ್ಕಳಿನ ಸಮೀಪ ಸೂಜಿ,ದಾರ ಪೋಣಿಸಿದರು. ಬಾಲಕರು ‘ಅಯ್ಯಯ್ಯಯ್ಯೋ’ ಎಂದು ಬೊಬ್ಬೆ ಹೊಡೆಯುತ್ತ ಅಲ್ಲಿಂದ ಒಂದೂವರೆ ಕಿಮೀ ದೂರದ ದೇವತಿ ದೇವಸ್ಥಾನದತ್ತ ಬರಿಗಾಲಲ್ಲಿ ಸಾಗಿ ಅಲ್ಲಿ ದೇವರಿಗೆ ಸೂಜಿ, ದಾರವನ್ನು ತೆಗೆದು ಹರಕೆ ಒಪ್ಪಿಸಿದರು. ಮಾಜಾಳಿ ರಾಮನಾಥ ದೇವಸ್ಥಾನಕ್ಕೆ ನಡೆದುಕೊಳ್ಳುವ ಕುಟುಂಬದ ಯುವಕರು ತಮ್ಮ ವಿವಾಹಕ್ಕೂ ಪೂರ್ವದಲ್ಲಿ ಈ ಹರಕೆ ಒಪ್ಪಿಸುವ ಪದ್ಧತಿ ರೂಢಿಯಲ್ಲಿದೆ. 10-12 ವರ್ಷದಲ್ಲೇ ಕೆಲವರು ಇಲ್ಲಿಗೆ ಬಂದು ಹರಕೆ ಒಪ್ಪಿಸಿದರೆ, 30-35 ವರ್ಷದ ಯುವಕರೂ ಬರುವುದುಂಟು.
ದೀವಜ್ ಮೆರವಣಿಗೆ: ಸ್ಥಳೀಯ ಕೊಂಕಣಿ ಭಾಷೆಯಲ್ಲಿ ದೀವಜ್ ಎಂದು ಕರೆಯುವ ಐದು ಎಸಳುಗಳುಳ್ಳ ದೀಪವನ್ನು ಹಚ್ಚಿಕೊಂಡು, ತಲೆಯ ಮೇಲೆ ಹೊತ್ತುಕೊಂಡ ಮಹಿಳೆಯರು, ಬಾಲಕಿಯರು ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನಕ್ಕೆ ಸಾಗಿದರು. ರಾಮನಾಥ ದೇವ ಸ್ಥಾನಕ್ಕೆ ನಡೆದುಕೊಳ್ಳುವ ಕುಟುಂಬಗಳಿಗೆ ಹೊಸದಾಗಿ ಮದುವೆಯಾಗಿ ಬರುವ ಮಹಿಳೆಯರು. ಅಥವಾ ಆ ಕುಟುಂಬದ ಬಾಲಕಿಯರು ಈ ಹಕರೆ ಒಪ್ಪಿಸುವ ಪದ್ಧತಿ ರೂಢಿಯಲ್ಲಿದೆ. ಪ್ರತಿ ವರ್ಷ ಜಾತ್ರೆಗೆ ಬಂದು ಹರಕೆ ಒಪ್ಪಿಸುವುದೂ ಇದೆ.
ಬಂಡಿ ಎಳೆದ ಭಕ್ತರು: ಆಲೆಮನೆಯ ಗಾಣದಂತೆ ಇರುವ ಎರಡು ಬಂಡಿಗೆ ಕನಕಾಂಬರ ಮಾಲೆ ಸುತ್ತಿಕೊಂಡು ಅದನ್ನು ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನಕ್ಕೆ ಎಳೆದುತರಲಾಯಿತು. ಭಕ್ತರು ಬಂಡಿಗೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.