

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ಗ್ರಾಮದಲ್ಲಿ ಇತ್ತೀಚೆಗೆ ಸುಕ್ಷೇತ್ರ ಕುಪ್ಪೂರು ಗದ್ದಿಗೆ ಮಠದ ನೂತನ ಶ್ರೀಗಳಾದ ಶ್ರೀ ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಬೆಳ್ಳಿಯ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಗ್ರಾಮಕ್ಕೆ ಶ್ರೀಗಳು ಆಗಮಿಸುತ್ತಿದ್ದಂತೆ ಮಹಿಳೆಯರು ದೀಪದ ಆರತಿ ಬೆಳಗಿ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿದರು. ನಂತರ ಭಕ್ತರು ಸ್ವಾಮೀಜಿ ಅವರ ಪಾದಪೂಜೆ ಹಾಗೂ ವಿವಿಧ ಪೂಜೆ ಪುನಸ್ಕಾರಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿದರು. ನಂತರ ಗ್ರಾಮದ ನಿರ್ವಾಣ ಸಿದ್ದೇಶ್ವರ ಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.
ಅಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಶ್ರೀ ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ ಆಸೀನರಾದರು. ಪಲ್ಲಕ್ಕಿ ಏರುತ್ತಿದ್ದಂತೆ ಭಕ್ತರ ಜಯಘೋಷ ಮೊಳಗಿದವು. ಭಕ್ತಿಯಿಂದ ಪಲ್ಲಕ್ಕಿಯನ್ನು ಹೊತ್ತು ಪುನೀತರಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವವು ಸಡಗರದಿಂದ ಸಾಗಿತು. ಲಿಂಗದ ಬೀರರ ಕುಣಿತ, ವೀರಗಾಸೆ, ನಾಸಿಕ್ ಡೋಲು, ವಿವಿಧ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿತು.
ಉತ್ಸವದ ನಂತರ ಗುರುಪರುವು ಹಮ್ಮಿಕೊಳ್ಳಲಾಗಿತ್ತು. ಬೆಳ್ಳಿಯ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ರಾಂಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಆಗಮಿಸಿದ್ದರು. ಶ್ರೀ ನಿರ್ವಾಣ ಸಿದ್ದೇಶ್ವರ ಯುವಕ ಸಂಘ, ಗೆಳೆಯರ ಬಳಗ , ಸಿದ್ದುಶ್ರೀ ಸೇವಾ ಸಮಿತಿ, ಗುಡಿಗೌಡರು, ಅಜ್ಜಾರಮನೆ ಶಿವಳ್ಳಿ ರಾಂಪುರ ಗ್ರಾಮಸ್ಥರು ಇದ್ದರು.