

ಹೊಳೆನರಸೀಪುರ: ತಾಲೂಕಿನ ಜಕ್ಕವಳ್ಳಿಕೊಪ್ಪಲು ಗ್ರಾಮದಲ್ಲಿ ಶ್ರೀ ದೊಡ್ಡಮ್ಮ, ಚಿಕ್ಕಮ್ಮದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಸಡಗರದಿಂದ ಜರುಗಿತು.
ಹೇಮಾವತಿ ನದಿ ತಟದಲ್ಲಿ ಉತ್ಸವ ಮೂರ್ತಿಗಳಿಗೆ ಪುಣ್ಯಾಹ, ಶುದ್ಧಿ, ವಿವಿಧ ಪುಷ್ಪಗಳಿಂದ ಅಲಂಕಾರ, ಗಂಗಾ ಕಳಸ ಪೂಜಾ ಕೈಂಕರ್ಯ ನಂತರ ಮಂಗಳಾರತಿ ನೆರವೇರಿಸಲಾಯಿತು. ಸುಮಂಗಲಿಯರು ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಕಳಸವನ್ನು ಹೊತ್ತು ದೇವಾಲಯಕ್ಕೆ ಆಗಮಿಸಿದರು. ದೇವಾಲಯದ ಆವರಣದಲ್ಲಿ ಹೋಮ, ಹವನ ನೆರವೇರಿದವು. ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು. ಅರ್ಚಕ ರಾಜೇಗೌಡರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ ನೆರವೇರಿದವು.
ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಮೂಡಲಹಿಪ್ಪೆ ಗ್ರಾಪಂ ಸದಸ್ಯರಾದ ರೇವಣ್ಣ, ರಮೇಶ, ಸಾವಿತ್ರಮ್ಮ, ಮಾಜಿ ಅಧ್ಯಕ್ಷ ಕುಮಾರ್, ಮಾಜಿ ಸದಸ್ಯ ಜಯಣ್ಣ, ಮುಖಂಡರಾದ ಪುಟ್ಟಸ್ವಾಮಣ್ಣ , ಮಂಜೇಗೌಡ, ನಂಜೇಗೌಡ, ಸ್ವಾಮಿಗೌಡ, ಮಂಜುನಾಥ್, ಕುಮಾರ್ ಹಾಗೂ ಗುಂಜೇವು, ಜಕ್ಕವಳ್ಳಿ, ಜಕ್ಕವಳ್ಳಿಕೊಪ್ಪಲು ಗ್ರಾಮಸ್ಥರು ಭಾಗವಹಿಸಿದ್ದರು.