ಸಂಭಾವ್ಯ ಅಪಾಯ ತಪ್ಪಿಸುವ ಉದ್ದೇಶ

31KMT3
Published on

ಕುಮಟಾ: ಕರೊನಾ ಪಾಸಿಟಿವ್ ಪ್ರಕರಣಗಳ ಕುರಿತು ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಹೆಚ್ಚೆಚ್ಚು ಪ್ರಕರಣಗಳನ್ನು ತೋರಿಸಿದಷ್ಟೂ ಹೆಚ್ಚು ಅನುದಾನ ಸಿಗುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಸ್ಪಷ್ಟಪಡಿಸಿದರು.

ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ಕರೊನಾ ಕುರಿತು ಅಧಿಕಾರಿಗಳ ಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಮಗೆ ಇಂತಿಷ್ಟು ಪಾಸಿಟಿವ್ ಪ್ರಕರಣಗಳನ್ನು ದಾಖಲಿಸಬೇಕೆಂಬ ಗುರಿ ನಿಗದಿ ಪಡಿಸಿಲ್ಲ. ಒಂದೆಡೆ ಪಾಸಿಟಿವ್ ಬಂದ ತಕ್ಷಣ ಅವರ ಸಂಪರ್ಕಕ್ಕೆ ಬಂದವರನ್ನು ಹಾಗೆಯೇ ಬಿಡಲಾಗದು, ಆರೋಗ್ಯವಂತ ಸದೃಢ ಸೋಂಕಿತರಿಗಿಂತ ಕರೊನಾ ಸೋಂಕು ಯಾರಿಗೆ ಅಪಾಯ ಆಗಬಹುದೋ ಅಂಥವರನ್ನು ಮುಂಜಾಗ್ರತೆಯಿಂದ ರಕ್ಷಿಸುವ ಉದ್ದೇಶ ಸರ್ಕಾರದ್ದು. ಆದರೆ ಕರೊನಾ ಪಾಸಿಟಿವ್ ಪ್ರಕರಣಗಳನ್ನು ಹೆಚ್ಚೆಚ್ಚು ತೋರಿಸಲು ಹೊರಟಿದ್ದಾರೆ ಎಂಬಂತೆ ಬಿತ್ತರವಾಗುತ್ತಿರುವ ವದಂತಿಗಳಿಗೆ ಕಿವಿಗೊಡದೇ ಏನೇ ಸಂಶಯ, ಸಮಸ್ಯೆಗಳಿದ್ದರೂ ನಮ್ಮಲ್ಲಿ ಶುಲ್ಕರಹಿತವಾಗಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬೇಕು. ಸೋಂಕಿನಿಂದ ಸ್ವತಃ ಗುಣಮುಖರಾಗಬೇಕು ಹಾಗೂ ಇನ್ನೊಬ್ಬರಿಗೆ ಹರಡಬಾರದು. ಈ ಕಾರಣಕ್ಕಾಗಿ ಆಡಳಿತ ವ್ಯವಸ್ಥೆಯೊಂದಿಗೆ ಜನ ಸಹಕಾರ ಕೊಡಲೇಬೇಕು’ ಎಂದರು.

ಕುಮಟಾದಲ್ಲಿ ಕರೊನಾ ವಿಭಾಗದ 50 ಬೆಡ್​ಗೆ ನೇರ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ 50 ಹಾಸಿಗೆಗೆ ಮಾಡುತ್ತೇವೆ. ಇದು ಕರೊನಾ ಪ್ರಕರಣಗಳಿಗೆ ಮಾತ್ರವಲ್ಲ, ಮುಂದಿನ ದಿನದಲ್ಲಿ ಕುಮಟಾ ಆಸ್ಪತ್ರೆ ಎಲ್ಲ ರೀತಿಯಲ್ಲೂ ಸುಸಜ್ಜಿತವಾಗಿರಬೇಕು ಎಂಬ ಕಾರಣಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲೇ 100 ಹಾಸಿಗೆಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇರುವುದು ಕುಮಟಾದಲ್ಲಿ ಮಾತ್ರ ಆಗಲಿದೆ ಎಂದರು.

ಉಪವಿಭಾಗಾಧಿಕಾರಿ ಅಜಿತ್ ರೈ, ತಹಸೀಲ್ದಾರ್ ಮೇಘರಾಜ ನಾಯ್ಕ, ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಡಾ. ಆಜ್ಞಾ ನಾಯಕ, ಡಾ. ವಿ.ಕೆ.ಹೆಗಡೆ, ಇಓ ಸಿ.ಟಿ.ನಾಯ್ಕ ಇನ್ನಿತರರು ಇದ್ದರು.

ಅನ್ಯ ಕಾಯಿಲೆಯಿಂದ 39 ಜನ ಸಾವು: ಭಟ್ಕಳ: ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟ 53 ಜನರಲ್ಲಿ 39 ಜನರಿಗೆ (ಶೇ.70 ರಷ್ಟು )ಬೇರೆ ರೋಗಗಳಿದ್ದವು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು. ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸೋಮವಾರ ಕೋವಿಡ್ ಸಂಬಂಧ ಸಭೆ ನಡೆಸಿ, ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಮೃತರಲ್ಲಿ ಒಬ್ಬ ಮಾತ್ರ 20ಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದು, 21 ರಿಂದ 40 ವಯಸ್ಸಿನ ಮೂವರು, 41 ರಿಂದ 60 ವಯಸ್ಸಿನವರು 13, 61 ರಿಂದ 80 ವಯಸ್ಸಿನವರು 31, 81 ವರ್ಷಕ್ಕಿಂತ ಮೇಲ್ಪಟ್ಟವರು ಮೂವರು ಸೇರಿದ್ದಾರೆ ಎಂದು ವಿವರಿಸಿದರು. ಭಟ್ಕಳದಲ್ಲಿ ಆಗಸ್ಟ್ 30ರ ವರೆಗೆ 1398 ಜನರಿಗೆ ಸೋಂಕು ತಗುಲಿದ್ದು, 18 ಜನ(ಶೇ.1.3)ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಸಂಖ್ಯೆ ಹೆಚ್ಚಿದ್ದರಿಂದ ಅದಕ್ಕೆ ತಕ್ಕಂತೆ ಸಾವಿನ ಸಂಖ್ಯೆಯೂ ಹೆಚ್ಚಿದೆ. ಜನ ಭಯಗೊಂಡು ಆಸ್ಪತ್ರೆಗೆ ತೆರಳದೇ ರೋಗ ಉಲ್ಬಣಗೊಳಿಸಿಕೊಳ್ಳಬಾರದು ಎಂದರು. ಇದುವರೆಗೆ ಜಿಲ್ಲೆಯಲ್ಲಿ ಪ್ರತಿ ದಿನ 1800 ವರೆಗೂ ಕರೊನಾ ಪರೀಕ್ಷೆ ನಡೆಯುತ್ತಿತ್ತು. ಈಗ ಜನರ ಅಸಹಕಾರ, ವಿರೋಧಗಳಿಂದ ಪರೀಕ್ಷೆಯ ಸಂಖ್ಯೆ ಪ್ರತಿ ದಿನ 1 ಸಾವಿರಕ್ಕೆ ಇಳಿದಿದೆ. ಶೇ. 1.1ರಷ್ಟು ಮಾತ್ರ ಸಾವು ಸಂಭವಿಸುತ್ತಿದೆ ಎಂದರು. ತಹಸೀಲ್ದಾರ್ ರವಿಚಂದ್ರ ಎಸ್.ಉಪಸ್ಥಿತರಿದ್ದರು.

ಸೋಮವಾರ 106 ಜನರಲ್ಲಿ ಕರೊನಾ ಸೋಂಕು: ಕಾರವಾರ: ಸೋಮವಾರ ಜಿಲ್ಲೆಯ 106 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಕಾಣಿಸಿಕೊಂಡಿದೆ. 79 ಜನ ಗುಣವಾಗಿದ್ದಾರೆ. ಭಟ್ಕಳದಲ್ಲಿ 2 ಸಾವು ಸಂಭವಿಸಿವೆ. ಜೊಯಿಡಾ, ಕಾರವಾರ ಮತ್ತು ಶಿರಸಿಯಲ್ಲಿ ತಲಾ 11, ಕುಮಟಾದಲ್ಲಿ 20, ಹೊನ್ನಾವರದಲ್ಲಿ 9, ಭಟ್ಕಳ ಮತ್ತು ಯಲ್ಲಾಪುರದಲ್ಲಿ ತಲಾ 6, ಅಂಕೋಲಾದಲ್ಲಿ 4, ಮುಂಡಗೋಡಿನಲ್ಲಿ 8, ಹಳಿಯಾಳ ಹಾಗೂ ದಾಂಡೇಲಿ ಸೇರಿ 20 ಜನರಲ್ಲಿ ಸೋಂಕಿರುವುದು ಕಂಡುಬಂದಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 4966ಕ್ಕೆ ಏರಿದ್ದು, 1170 ಸಕ್ರಿಯ ಪ್ರಕರಣಗಳಿವೆ. 482 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರವಾರದಲ್ಲಿ 10, ಅಂಕೋಲಾದಲ್ಲಿ 16, ಕುಮಟಾದಲ್ಲಿ 2, ಹಳಿಯಾಳ ಮತ್ತು ದಾಂಡೇಲಿ ಸೇರಿ 17, ಭಟ್ಕಳದಲ್ಲಿ 23, ಶಿರಸಿಯಲ್ಲಿ 5, ಹೊನ್ನಾವರ ಹಾಗೂ ಯಲ್ಲಾಪುರದಲ್ಲಿ ತಲಾ 3 ಜನ ಕರೊನಾದಿಂದ ಗುಣ ಹೊಂದಿದ್ದಾರೆ. ಒಟ್ಟಾರೆ ಗುಣವಾದವರ ಸಂಖ್ಯೆ 3743ಕ್ಕೆ ಏರಿಕೆಯಾಗಿದೆ. ಭಟ್ಕಳದ ಒಬ್ಬ ವ್ಯಕ್ತಿ ಅಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಶಿರಸಿಯ 65 ವರ್ಷದ ಕರೊನಾ ಸೋಂಕಿತ ಕಾರವಾರ ಕ್ರಿಮ್ಸ್​ನಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆ ಸಂಖ್ಯೆ 53 ಕ್ಕೆ ಏರಿದೆ. ಕ್ರಿಮ್್ಸ ಆಸ್ಪತ್ರೆಯಲ್ಲಿ ದಾಂಡೇಲಿಯ 27 ವರ್ಷದ ಗರ್ಭಿಣಿಗೆ ಹೆರಿಗೆ ಮಾಡಿಸಲಾಗಿದೆ. ಹೆಣ್ಣು ಮಗು ಜನಿಸಿದ್ದು, ಆರೋಗ್ಯಕರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net