ಸಂಪತ್ತು ಸತ್ಕಾರ್ಯಕ್ಕೆ ಬಳಕೆಯಾಗಲಿ

FotoJet
Published on

 ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಶಯ | ಜಗದ್ಗುರು ಶ್ರೀ ಶಂಕರಾಚಾರ್ಯರ ಸಂದೇಶ ಪಾಲಿಸಿದಾಗ ಜೀವನ ಸಾರ್ಥಕ

ಬಾಗೇಪಲ್ಲಿ : ಮಾನವನ ಬಳಿ ಇರುವ ಹಣ, ಐಶ್ವರ್ಯವನ್ನು ಒಳ್ಳೆಯ ಕೆಲಸಗಳಿಗೆ ಬಳಸುವಂತೆ ಉಪದೇಶ ನೀಡಿರುವ ಜಗದ್ಗುರು ಶಂಕರಾಚಾರ್ಯರ ಸಂದೇಶವನ್ನು ಪಾಲಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹೊರವಲಯದ ಆದಿರೆಡ್ಡಿ ಬಡಾವಣೆ ಬಳಿ ಧರ್ಮಾವರಂ ನಾರಾಯಣಪ್ಪ ಕುಟುಂಬದವರು ನಿರ್ಮಿಸಿರುವ ಶ್ರೀ ಮಹಾಲಕ್ಷ್ಮೀ ದೇವಾಲಯ ಲೋಕಾರ್ಪಣೆ, ಗೋಪುರ ಕಳಶ ಸ್ಥಾಪನೆ ಹಾಗೂ ವಿಗ್ರಹ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ನಂತರ ಆಶೀರ್ವಚನ ನೀಡಿದರು.

ಮನುಕುಲದ ವ್ಯವಸ್ಥೆಯಲ್ಲಿರುವ ಎಲ್ಲರೂ ಒಂದೇ ರೀತಿ ದಾನ ಮಾಡಬೇಕೆಂದು ಶಂಕರಾಚಾರ್ಯರ ಶಾಸ್ತ್ರದಲ್ಲಿ ಎಲ್ಲಿಯೂ ಹೇಳಿಲ್ಲ. ಅವರವರ ಪರಿಸ್ಥಿತಿ, ಶಕ್ತಿಗೆ ಅನುಗುಣವಾಗಿ ದಾನ ಮಾಡಬಹುದು. ಆದರೆ, ಒಳ್ಳೆಯ ಕೆಲಸಗಳಿಗೆ ಮಾತ್ರ ದಾನ ಮಾಡಬೇಕು. ಯೋಗ್ಯರಿಗೆ, ಸತ್ಕಾರ್ಯಗಳಿಗೆ ಮಾಡುವ ದಾನವನ್ನು ಸತ್ಪಾತ್ರ ದಾನ ಎಂದು ಕರೆಯಲಾಗುತ್ತದೆ. ಅಯೋಗ್ಯರು ಮಾಡುವ ಅನರ್ಥ ಕೆಲಸಗಳಿಗೆ ಮಾಡುವ ದಾನವನ್ನು ಅಪಾತ್ರ ದಾನ ಎನ್ನುತ್ತೇವೆ. ಆದ್ದರಿಂದ ಏನು ದಾನ ಮಾಡಿದ್ದೇವೆ ಎನ್ನುವುದಕ್ಕಿಂತ ಯಾವ ಕಾರ್ಯಕ್ಕೆ ದಾನ ಮಾಡುತ್ತಿದ್ದೇವೆ ಎಂಬುದನ್ನು ಆಲೋಚಿಸಿ ದಾನ ಮಾಡಬೇಕು ಎಂದರು.

ದಾನ ನೀಡುವ ಯಾವುದೇ ವಸ್ತು ದೊಡ್ಡದು ಅಥವಾ ಚಿಕ್ಕದು ಅಲ್ಲ. ದಾನಿಯ ಪರಿಸ್ಥಿತಿ, ಸಂದರ್ಭಕ್ಕೆ ಅನುಗುಣವಾಗಿ ವ್ಯತ್ಯಾಸ ಆಗುತ್ತದೆ. ಹಿಂದಿನ ಬದುಕಿನ ಸ್ಥಿತಿ ಗಮನಿಸಿಕೊಳ್ಳಬೇಕೇ ಹೊರತು ದಾನದ ವಸ್ತುವಿನ ಗಾತ್ರವನ್ನಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಒಂದು ಸಾವಿರ ವರ್ಷಗಳ ಹಿಂದೆಯೇ ಸನಾತನ ಧರ್ಮ ಪ್ರಚಾರಕರಾಗಿ ಶ್ರೀ ಶಂಕರಚಾರ್ಯರು ದೇಗುಲ ನಿರ್ಮಿಸಿ ದಾನ ಮತ್ತು ಧರ್ಮದ ಬಗ್ಗೆ ಉಪದೇಶಿಸಿದ್ದಾರೆ. ಅವರ ಮಾರ್ಗದಲ್ಲಿ ಇಂದು ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಜಗನ್ಮಾತೆಯ ಕೃಪೆಗೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದರು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಗಳಿಂದ ಸದ್ಗುರು ಶ್ರೀ ವಿಧುಶೇಖರ ಭಾರತಿ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಆಶೀರ್ವದಿಸಿ ತೀರ್ಥ ಪ್ರಸಾದ ವಿನಿಯೋಗಿಸಿದರು. ಧರ್ಮಾವರಂ ನಾರಾಯಣಪ್ಪ ಕುಟುಂಬದವರಿಂದ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಾಗೇಪಲ್ಲಿ ತಾಲೂಕಿನ ವಿಪ್ರ ಸಮುದಾಯದ ಮುಖಂಡರು, ಆರೋಗ್ಯ ಇಲಾಖೆ ಅಧಿಕಾರಿಗಳು, ಘಂಟಂವಾರಪಲ್ಲಿ ಗ್ರಾಮದ ಗ್ರಾಮಸ್ಥರು, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net