ಸಂತೇಖಾನೆ ಹಳ್ಳದಲ್ಲಿ ವಿಹರಿಸಿದ ಕಾಡಾನೆಗಳು

02 HANUR 3
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ವಡಕೆಹಳ್ಳ ಗ್ರಾಮ ಸಮೀಪದ ಸಂತೇಖಾನೆ ಬಳಿಯ ಹಳ್ಳದಲ್ಲಿ ಬುಧವಾರ ಕಾಡಾನೆಗಳು ಹಿಂಡು ಕೆಲಕಾಲ ನೀರಿನಲ್ಲಿ ಮುಳುಗಿ ನೋಡುಗರಲ್ಲಿ ಕುತೂಹಲ ಮೂಡಿಸಿದವು. ಬಳಿಕ ರಸ್ತೆ ದಾಟುವ ವೇಳೆ ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದವು.

ಮಲೆಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ರಸ್ತೆ ಬದಿಯಲ್ಲಿನ ಈ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಿದ್ದು ಸ್ವಲ್ಪ ಮಟ್ಟಿಗೆ ನೀರು ಶೇಖರಣೆಯಾಗಿದೆ. ಇದೀಗ ಬೇಸಿಗೆಯಾದ್ದರಿಂದ ಬೆಳಗ್ಗೆ ಸುಮಾರು 6ರ ವೇಳೆಯಲ್ಲಿ ಅರಣ್ಯ ಪ್ರದೇಶದಿಂದ ಮರಿ ಆನೆಗಳೊಂದಿಗೆ ಆಗಮಿಸಿದ ಕಾಡಾನೆಗಳ ಹಿಂಡು ದಾಹವನ್ನು ನೀಗಿಸಿಕೊಂಡು ನೀರಿನಲ್ಲಿ ಮುಳುಗಿದವು. ಕೆಲಕಾಲ ರಿಲ್ಯಾಕ್ಸ್‌ಗೆ ಜಾರಿದವು. ಇದನ್ನು ಗಮನಿಸಿದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಬಳಿಕ ಕಾಡಾನೆಗಳು ಅರಣ್ಯ ಪ್ರದೇಶದೊಳಗೆ ತೆರಳಲು ರಸ್ತೆ ದಾಟುತ್ತಿದ್ದಂತೆಯೇ 2 ಬದಿಯ ವಾಹನ ಸವಾರರು ಸ್ವಲ್ಪ ದೂರ ಸರಿದು ಚಲನ ವಲನವನ್ನು ಗಮನಿಸಿದರು. ಈ ವೇಳೆ ಕೆಲ ವಾಹನ ಸವಾರರು ಆತಂಕಗೊಂಡರು. ಕಾಡಾನೆಗಳ ಹಿಂಡು ಅರಣ್ಯ ಪ್ರದೇಶದೊಳಗೆ ತೆರಳಿದಾಗ ನಿಟ್ಟುಸಿರು ಬಿಟ್ಟು ಮುಂದೆ ಚಲಿಸಿದರು.

ಈ ಮಾರ್ಗವು ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಇದೀಗ ಬೇಸಿಗೆಯಾದ್ದರಿಂದ ಅರಣ್ಯ ಪ್ರದೇಶದಿಂದ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವುದು ಹಾಗೂ ರಸ್ತೆಯನ್ನು ದಾಟುವುದು ಕಂಡು ಬರುತ್ತಿದೆ. ಇದರಿಂದ ಮ.ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ ಉಂಟು ಮಾಡುವಂತಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮುತುರ್ವಜಿ ವಹಿಸಿ ಈ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಕಾಡಾನೆಗಳು ರಸ್ತೆಗೆ ಆಗಮಿಸಿದಂತೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net