

ಹಿರೇಕೆರೂರ: ರೈತರು ಬೆಳೆದಂಥ ದವಸ ಧಾನ್ಯ, ತರಕಾರಿ ಮಾರಾಟ ಮಾಡಲು ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಮಾರುಕಟ್ಟೆಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಸಂತೆ ಮೈದಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದ ವತಿಯಿಂದ 1.70 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಶ್ರೀ ದುರ್ಗಾದೇವಿ ಸಂತೆ ಮೈದಾನ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿನ ವಾರದ ಸಂತೆ ಪ್ರಸಿದ್ಧಿ ಪಡೆದಿದ್ದು, ಕಾರವಾರ, ಶಿರಸಿ, ಸೊರಬ, ಶಿಕಾರಿಪುರ, ಸಿದ್ದಾಪುರ ಸೇರಿ ಹಲವು ಮಹಾನಗರಗಳಿಗೆ ಇಲ್ಲಿಂದಲೇ ತರಕಾರಿ, ಧಾನ್ಯಗಳು ರಫ್ತಾಗುತ್ತವೆ. ಹೊಂಡದ ಸ್ಥಳ ಇದಾಗಿದ್ದರಿಂದ ತಗ್ಗು ಪ್ರದೇಶದಲ್ಲಿ ಸಂತೆ ಮೈದಾನ ನಿರ್ವಣವಾಗಿದೆ. ಮಳೆಗಾಲದಲ್ಲಿ ನೀರು ನಿಂತು ವ್ಯಾಪಾರಸ್ಥರಿಗೆ, ಗ್ರಾಹಕರಿಗೆ, ರೈತರಿಗೆ ತೊಂದರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ವಿಶೇಷ ಅನುದಾನ ತರುವ ಮೂಲಕ ಚರಂಡಿ, ರಸ್ತೆ ಸೇರಿ ಸಂತೆ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಾ.ಪಂ. ಅಧ್ಯಕ್ಷ ರಾಜು ಬಣಕಾರ, ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ಪಪಂ ಮುಖ್ಯಾಧಿಕಾರಿ ರಾಜಾರಾಮ್ ಪವಾರ, ಪ.ಪಂ. ಸದಸ್ಯರು, ಡಿ.ಸಿ. ಪಾಟೀಲ, ರಮೇಶ ಹಿತ್ಲಳ್ಳಿ, ಜಗದೀಶ ಮುರಡೇಶ್ವರ, ಪಪಂ ಅಧಿಕಾರಿಗಳಾದ ಡಿ.ನಾಗರಾಜ, ಗಾಯಿತ್ರಿ ಬಿಳಚಿ, ಮಮತಾ ಪಾಟೀಲ, ಗುತ್ತಿಗೆದಾರರಾದ ವೆಂಕಟೇಶ ಉಪ್ಪಾರ, ಆನಂದ ಕುಬಸದ, ಅಯೂಬ್ ಪಠಾಣ, ಮಹಾದೇವ ಕಣಕುಪ್ಪಿ, ರವಿ ಚಿಂದಿ, ಇತರರು ಇದ್ದರು.