

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಸ್ನಾತಕೋತ್ತರ ವಿಭಾಗ, ಎನ್ನೆಸ್ಸೆಸ್ ಘಟಕ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜು ಸಹಯೋಗದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿ.ಯು ಕಾಲೇಜು ಪ್ರಾಂಶುಪಾಲ ರೆ.ಫಾ. ಮುದಲೈ ಮುತ್ತು ಕಾರ್ಯಕ್ರಮ ಉದ್ಘಾಟಿಸಿದರು.
ರೆ.ಫಾ.ಮುದಲೈ ಮುತ್ತು ಮಾತನಾಡಿ, ಯೋಗವು ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದೆ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆಯಾಗಿದೆ. ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು.
ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮಾ, ಎನ್ನೆಸ್ಸೆಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಯುವ ರೆಡ್‌ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಪಿ.ಯು.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಹೇಮಂತ್ ಹಾಜರಿದ್ದರು.
ಎನ್‌ಸಿಸಿ ಘಟಕದಿಂದಲೂ ಯೋಗ ದಿನಾಚರಣೆ: ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ ಶಾಲೆಯ ಎನ್‌ಸಿಸಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಜೇಮ್ಸ್ ಡೊಮಿನಿಕ್ ಅವರು ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಏರ್‌ಫೋರ್ಸ್ ಎನ್‌ಸಿ ಸಿ ಅಧಿಕಾರಿ ಅಬ್ದುಲ್ ಮುನೀರ್, ಆರ್ಮಿ ಎನ್‌ಸಿಸಿ ಘಟಕದ ಅಧಿಕಾರಿ ಸಹನಾ, ಶಿಕ್ಷಕರಾದ ರೂಪಾ, ಲಕ್ಷ್ಮೀಶ ಇತರರು ಹಾಜರಿದ್ದರು.