ಸಂಘಗಳಲ್ಲಿ ಹಣಕಾಸು ದುರುಪಯೋಗ ಬೇಡ

29 gkp 06
Published on

ಗೋಣಿಕೊಪ್ಪ: ರಾಜ್ಯದ ಸಹಕಾರ ಸಂಘಗಳಲ್ಲಿ ಪೈಕಿ ಕೊಡಗು ಸಹಕಾರ ಕ್ಷೇತ್ರವು ಅಗ್ರಸ್ಥಾನದಲ್ಲಿದೆ. ರೈತರಿಗೆ ಉತ್ತಮ ಸೇವೆ ನೀಡುತ್ತಿವೆ. ಇದರಿಂದ ರೈತರ ಹಾಗೂ ಸಂಘದ ಸದಸ್ಯರ ಬೆಳವಣಿಗೆಗೆ ಪೂರಕವಾದ ಬೆಂಬಲ ದೊರೆಯುತ್ತಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಕೆ.ಬಾಡಗ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂಘಗಳು ಹಣಕಾಸು ದುರುಪಯೋಗ ಇಲ್ಲದೆ ನಡೆಯಬೇಕು. ಗ್ರಾಮೀಣ ಭಾಗದ ಜನರಿಗೆ ಬಹಳ ವೇಗವಾಗಿ ಸಹಾಯ ನೀಡಬಹುದಾದ ಸಂಸ್ಥೆ ಸಹಕಾರಿ ಸಂಸ್ಥೆಯಾಗಿದೆ. ಕೊಡಗಿನ ಸಹಕಾರ ಸಂಘಗಳಲ್ಲಿ ದುರುಪಯೋಗ ವರದಿಗಳು ಅಷ್ಟಾಗಿ ಕೇಳಿ ಬರುತ್ತಿಲ್ಲ. ಪ್ರಜ್ಞಾವಂತ ನಾಗರಿಕರು ಸಂಘವನ್ನು ಮುನ್ನಡೆಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಿಕಸಿತ ಭಾರತದಲ್ಲಿ ಕೊಡಗು ಆದರ್ಶ ಕ್ಷೇತ್ರವಾಗಲಿ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ. ಕೇಂದ್ರ ಸರ್ಕಾರದ ಗುರಿ ಸಮೃದ್ಧ ಭಾರತದಲ್ಲಿ ರೈತರಿಗೆ, ಗ್ರಾಮೀಣ ಭಾಗದ ಜನತೆಗೆ ಸಹಕಾರ ಆಗಬೇಕು ಎಂಬುದು. ಆ ನಿಟ್ಟಿನಲ್ಲಿ ದೊಡ್ಡ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರದ ಅನುದಾನವನ್ನು ಮೊದಲಿಗೆ ಕೆ.ಬಾಡಗಕ್ಕೆ ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಕೆ.ಬಾಡಗ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಚಿಮಾಡ ಎಂ.ತಿಮ್ಮಯ್ಯ ಮಾತನಾಡಿ, ಸಂಘದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 50 ಸೆಂಟ್ ಜಾಗವನ್ನು ಖರೀದಿಸಲಾಗಿದೆ. 350 ಅಧಿಕ ಸದಸ್ಯರು ಸಂಘದಲ್ಲಿದ್ದಾರೆ. 4 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಮದ ದಾನಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ. ಕೊಡಗು ಡಿಸಿಸಿ ಬ್ಯಾಂಕ್ ಉತ್ತಮ ಸಹಕಾರ ನೀಡಿದೆ. ಸಂಘದ ಬೆಳವಣಿಗೆಗೆ ಶಾಸಕ ಹಾಗೂ ಸಂಸದರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡೆಂದೆರ ಬಾಂಡ್ ಗಣಪತಿ ಮಾತನಾಡಿ, ಸಂಘದ ಸದಸ್ಯರು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ. ಕಟ್ಟಡ ನಿರ್ಮಾಣಕ್ಕೆ ಸಾಲ ಒದಗಿಸಲಾಗುತ್ತದೆ. ಇಲ್ಲಿನ ಸದಸ್ಯರಿಗೆ, ರೈತರಿಗೆ ಸಕಾಲದಲ್ಲಿ ಸಮರ್ಪಕವಾಗಿ ರಸ ಗೊಬ್ಬರ, ಸಾಲ ಯೋಜನೆ ಹಾಗೂ ಮತ್ತಿತರ ಸೌಲಭ್ಯಗಳು ದೊರಕುವಂತೆ ಮಾಡುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ ಎಂದರು.

ಉಪ ನಿಬಂಧಕ ವಿಜಯ್‌ಕುಮಾರ್, ಸಹಾಯಕ ನಿಬಂಧಕಿ ಶೈಲಜಾ, ಕೆ.ಬಾಡಗ ಗ್ರಾಪಂ ಅಧ್ಯಕ್ಷ ಮುಕ್ಕಾಟಿರ ರಿತೇಶ್ ಬಿ.ಬಿದ್ದಪ್ಪ, ಇಡಿಸಿ ಅಧ್ಯಕ್ಷ ಮಾಚಿಮಾಡ ಸಿ.ನಾಣಯ್ಯ, ಕುಟ್ಟ ಪ್ಯಾಕ್ಸ್ ಅಧ್ಯಕ್ಷ ಮಚ್ಚಮಾಡ ಬಿ.ಸುಬ್ರಹ್ಮಣಿ, ಯೋಜನಾ ಅಧಿಕಾರಿ ಮೇಕೇರಿರ ಎಸ್.ಮೋಹನ್, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net