

ಗೋಣಿಕೊಪ್ಪಲು: ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ಮಡಿಕೇರಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟ ವತಿಯಿಂದ ಇತ್ತೀಚೆಗೆ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕೊಡಗು ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಮೊಮ್ಮಕ್ಕಡ ಕೂಟದ ವತಿಯಿಂದ ಉತ್ತಮ ರಕ್ತದಾನ ಶಿಬಿರ ನಡೆಯುತ್ತಿದೆ. ಪ್ರಥಮ ಕಾರ್ಯಕ್ರಮವಾದರೂ ಉತ್ತಮವಾಗಿ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಕಡೆ ರಕ್ತದ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಸಂಘ-ಸಂಸ್ಥೆಗಳು ವರ್ಷದಲ್ಲಿ ಒಂದು ಬಾರಿ ರಕ್ತದಾನ ಶಿಬಿರ ಏರ್ಪಡಿಸಬೇಕು. ಇದರಿಂದ ರಕ್ತದ ಬೇಡಿಕೆ ಇರುವವರಿಗೆ ಉಪಯೋಗವಾಗುತ್ತದೆ ಎಂದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಪೊನ್ನಂಪೇಟಿ ಕೊಡವ ಸಮಾಜವನ್ನು ಮದುವೆ ಸಮಾರಂಭಗಳಿಗೆ ಮಾತ್ರವಲ್ಲದೆ ಹಲವು ಕಾರ್ಯಕ್ರಮಗಳಿಗೆ ನಾವು ಉಪಯೋಗಿಸುತ್ತಾ ಬಂದಿದ್ದೇವೆ. ನಮ್ಮ ಪೊಮ್ಮಕ್ಕಡ ಕೂಟ ಸಂಘವನ್ನು ಸ್ಥಾಪನೆ ಮಾಡಿ ಜಂಟಿಯಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಪ್ರಥಮವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೊಟೇರ ಕಿಸಾನ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಣಿಯಂಡ ಕಾವ್ಯಾ ಸೊಮ್ಮಯ್ಯ, ಮೂಕ್ಕಳೇರ ಆಶಾ, ಬಲ್ಯಮೀದೇರೀರ ಆಶಾ, ಚೆಕ್ಕೇರ ವಾಣಿ ಸಂಜು, ಬಲ್ಲಡ್ಚಂಡ ಕಸ್ತೂರಿ ಹಾಗೂ ಸದಸ್ಯರು, ಮಡಿಕೇರಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಪೂರ್ಣಿಮಾ, ಸೌಮ್ಯಾ ಜೂಲಿಯಟ್, ಚಂದ್ರಶೇಖರ್ ಇದ್ದರು.
ಶಿಬಿರದಲ್ಲಿ ಸುಮಾರು 42 ಜನ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವತಿಯಿಂದ ಪ್ರೇರೇಪಣಾ ಪತ್ರ ನೀಡಲಾಯಿತು.