ಸಂಗೀತಯುಕ್ತ ಇಷ್ಟಲಿಂಗ ಪೂಜೆಗೆ ಸಹಸ್ರಾರು ಭಕ್ತರು

IMG-20250703-WA0038
Published on

ತಿ.ನರಸೀಪುರ: ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಹಸ್ತಿಕೇರಿ ಮಠದಲ್ಲಿ ಬುಧವಾರ ಹಿಮವದ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ರಾವಲ್ ಭೀಮ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜನ ಜಾಗೃತಿ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ವಿಕಾಸ ವೇದಿಕೆ ಟ್ರಸ್ಟ್ ಸಹಯೋಗದಲ್ಲಿ ಸಪ್ತಾಹ ಕಾರ್ಯಕ್ರಮದ ತಲಕಾಡು ಗ್ರಾಮದ ಹಳೇ ಬೀದಿಯಲ್ಲಿರುವ ಹಸ್ತಿಕೇರಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಕೇದಾರ ಮಠದ ಪೀಠಾಧಿಪತಿಗಳಾದ 1008ನೇ ಜಗದ್ಗುರು ರಾವಲ್ ಭೀಮ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಅವರಿಂದ ಆಯೋಜಿಸಲಾಗಿದ್ದ ಸಂಗೀತಯುಕ್ತ ಇಷ್ಟಲಿಂಗ ಮಹಾ ಪೂಜಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ವೈಭವನ್ನು ಕಣ್ತುಂಬಿಕೊಂಡರು.

ಹಸ್ತಿಕೇರಿ ಮಠದ ಶ್ರೀ ಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಆರ್ಶೀವಚನ ನೀಡಿ, ಆರು ತಿಂಗಳ ಕಾಲ ಕೇದಾರನಾಥನ ಮೇಲೆ ಇದ್ದ ರತ್ನ ಖಚಿತ ಕಿರೀಟವು ದೇವಾಲಯದ ಬಾಗಿಲು ಮುಚ್ಚಿದ ಮೇಲೆ ಜಗದ್ಗುರುಗಳ ತಲೆಯ ಮೇಲಿರುತ್ತದೆ. ಆದ್ದರಿಂದ ಜಗದ್ಗುರುಗಳನ್ನು ನಡೆದಾಡುವ ಕೇದಾರನಾಥ ಎಂದು ಕರೆಯುತ್ತಾರೆ. ಮಹಾರಾಷ್ಟ್ರದ ಕೇದಾರ ಮಠದ ಪರಂಪರೆಯು ಬಹಳ ಪುರಾತನವಾಗಿದ್ದು ಹಿಮಾಲಯ ಪರ್ವತ ಶ್ರೇಣಿಯ ಪ್ರಮುಖ ನಾಲ್ಕು ಧರ್ಮಗಳಲ್ಲಿ ಒಂದಾಗಿದೆ. ವೀರಶೈವ ಲಿಂಗಾಯತ ಪಂಚಪೀಠದಲ್ಲಿ ಕೇದಾರ ಪೀಠವೂ ಒಂದಾಗಿದ್ದು, ನೀಲಿ ವರ್ಣದ ಧ್ವಜ ಸಂಕೇತ ಹಾಗೂ ವೈರಾಗ್ಯ ಪೀಠವೂ ಆಗಿದೆ ಎಂದು ತಿಳಿಸಿದರು.

ಬೆಳಗ್ಗೆ 8 ಗಂಟೆಯಿಂದಲೇ ಕೇದಾರ, ಊಖಿ ಮಠದ ಜಗದ್ಗುರುಗಳಾದ ರಾಹುಲ್ ಭೀಮ ಶಂಕರಲಿಂಗ ಶಿವಾಚಾರ್ಯರು ಇಷ್ಟಲಿಂಗ ಪೂಜೆಯನ್ನು ಮಧ್ಯಾಹ್ನ 1ಗಂಟೆವರೆಗೆ ನೆರವೇರಿಸಿದರು. ತಲಕಾಡು ಕ್ಷೇತ್ರದ ಧಾರ್ಮಿಕ ಮಹಾ ಮಹಿಮೆಯನ್ನು ತಿಳಿಸಿದರು. ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.

ಭಕ್ತರಿಗೆ ಮಠದ ವತಿಯಿಂದ ದಾಸೋಹ ಏರ್ಪಡಿಸಲಾಗಿತ್ತು. ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಜ್ಜಿಪುರ ಶ್ರೀ ನಂದೀಶ ಶಿವಾಚಾರ್ಯ ಸ್ವಾಮೀಜಿ, ವಿಕಾಸ ವೇದಿಕೆ ಟ್ರಸ್ಟ್‌ನ ಕಾರ್ಯದರ್ಶಿ ರೇಣುಕಾ ಪ್ರಸಾದ್, ಟ್ರಸ್ಟ್ ಸದಸ್ಯರಾದ ಬಸವಣ್ಣ, ಪ್ರದೀಪ್, ರವಿಕುಮಾರ್, ಎಸ್.ಬಿ.ಸುಗಂಧರಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ, ರೇಣುಕ ಸಮಾಜ ಪದಾಧಿಕಾರಿಗಳು, ಸದಸ್ಯರು, ಕುದೇರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ತಲಕಾಡು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net