

ಬಾಗಲಕೋಟೆ: ಹಿಂದುಳಿದ ಹಾಗೂ ದಲಿತ ಹಿಂದುಗಳ ಸಂಘಟನೆ, ಮಠಗಳ ಏಳಿಗೆಗಾಗಿ ಜನವರಿ ೧೪ ರಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಿ ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು. ಸಾವಿರ ಮಠಾಧೀಶರು ಸಮ್ಮುಖದಲ್ಲಿ ಅಂದೇ ನಾಮಕಾರಣ ಮಾಡಲಾಗುವುದು ಘೋಷಣೆ ಮಾಡಲಾಯಿತು.
ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದು ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದು ಅತೃಪ್ತರ ಸಭೆ ಅಲ್ಲ. ದಲಿತ, ಹಿಂದುಳಿದ ಹಿಂದುಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ದೊರೆಯುತ್ತಿರುವ ಸರ್ಕಾರದ ಅನುದಾನ ಹಿಂದುಳಿದ ಮಠಗಳಿಗೂ ಸಿಗಬೇಕು. ರಾಜಕಾರಣ ನನ್ನ ವೈಯಕ್ತಿಕ ವಿಚಾರ. ಈ ಸಂಘಟನೆಯಲ್ಲಿ ಅದನ್ನು ಬೆರೆಸಲು ಹೋಗುವದಿಲ್ಲ. ಭಾರತಾಂಬೆ ಬಂಜೆ ಅಲ್ಲ. ನಾವೆಲ್ಲ ಷಂಡರಲ್ಲ. ಈ ಹಿಂದೆ ರಾಯಣ್ಣ ಬ್ರಿಗೇಡ್ ಹಿರಿಯ ಮಾತಿಗೆ ಗೌರವ ಕೊಟ್ಟು ಹಿಂಪಡೆದುಕೊಂಡೆ. ಈ ಸಾರಿ ಹಾಗೇ ಆಗುವದಕ್ಕೆ ಬಿಡುವದಿಲ್ಲ. ಪಕ್ಷ ನನಗೆ ಡಿಸಿಎಂ, ೫ ಸಾರಿ ಶಾಸಕ, ವಿ.ಪ ಸದಸ್ಯ ಎಲ್ಲವನ್ನು ಮಾಡಿದೇ. ತಾಯಿ ಸ್ವರೂಪಿ ಪಕ್ಷಕ್ಕೆ ಕೆಲವರು ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ರಕ್ತ ಸುರಿಸಿ ಕಟ್ಟಿರುವ ಪಕ್ಷವನ್ನು ಹಾಳು ಮಾಡಲು ಬಿಡುವದಿಲ್ಲ ಅಂತ ಗರ್ಜನೆ ಮಾಡಿದರು.
ತಿಂಥಣಿ ಕಾಗಿನೆಲೆ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಮಾತನಾಡಿ, ವಂಚನೆಗೆ ಒಳಗಾಗಿರುವ ಬಹುಜನ ಸಮುದಾಯಗಳ ಸಂಸ್ಕೃತಿ ರಕ್ಷಣೆಗಾಗಿ ಇದು ನಿಲುವು ತೆಗೆದುಕೊಳ್ಳಬೇಕಿದೆ. ತಾತ್ವಿಕ ಬದ್ಧತೆ, ಸಿದ್ದಾಂತ ಬದ್ಧತೆ ಇರುವ ಸಂಘಟನೆ ಸ್ಥಾಪಿಸಲಾಗುತ್ತಿದೆ. ಗೆದ್ದೆತ್ತಿನ ಬಾಲ ಹಿಡಿಯುವವರು ನೆಮಗೆ ಬೇಕಿಲ್ಲ. ಹಿಂದು ಸಮಾಜದಲ್ಲಿ ಮೇಲ್ವರ್ಗದ ಮಠಾಧೀಶರಿಗೆ ಸರ್ಕಾರದ ಅನುದಾನ ದೊರೆಯುತ್ತಿದೆ. ಮರಿಯಮ್ಮ, ಬೀರಪ್ಪನಂತಹ ದೇವರು ಪೂಜೆ ನಡೆಸುವ ಮಠಾಧೀಶರಿಗೆ ಬಿಡಿಗಾಸು ಸಿಕ್ಕಿಲ್ಲ. ಈಶ್ವರಪ್ಪ ಪಕ್ಷದಿಂದ ಅನ್ಯಾಯ ಆಗಿದೆ ಅಂತ ಹೋರಾಟ ಮಾಡುತ್ತಿಲ್ಲ. ಪಕ್ಷಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಸಂಘ ಪರಿವಾರ ಹಾಗೂ ಪಕ್ಷದ ಹಿರಿಯರು ಇದನೆಲ್ಲ ಗಮನಿಸುತ್ತಿಲ್ಲ ಎಂದರು.
ಜಕನೂರಿನ ಮಾದುಲಿಂಗ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ, ಸೋಮೇಶ್ವರ ಸ್ವಾಮೀಜಿ, ಜನಾರ್ಧನ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಶರಭಯ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಸೋಮನಕೊಪ್ಪದ ನೀಲಲೂಹಿತ ಸ್ವಾಮೀಜಿ, ಹಳಿಂಗಳಿಯ ಮಹಾವೀರ ಅಲ್ಲಮಪ್ರಭು ಸ್ವಾಮೀಜಿ, ಹಾಲುಮತ ಹುಲಜಂತಿಯ ಮಹಾಳಿಂಗರಾಯ ಸ್ವಾಮೀಜಿ, ಮಾಜಿ ಶಾಸಕ ಗೋಳಿಹಟ್ಟಿ ಶೇಖರ, ಹಿಂದುಳಿದ ವರ್ಗಗಳ ಮುಖಂಡ ಮುಕುಡಪ್ಪ, ವೀರಣ್ಣ ಹಳೇಗೌಡರ ಸೇರಿದಂತೆ ಇತರರು ಇದ್ದರು.