ಸಂಕಷ್ಟದಲ್ಲಿ ಮೆಕ್ಕೆಜೋಳ ಬೆಳೆಗಾರ

20SIRSI1
Published on

ಶಿರಸಿ: ಮೆಕ್ಕೆಜೋಳ ದರ ಕುಸಿದಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಹಾಕಿದ ಬಂಡವಾಳ ತೆಗೆಯುವುದು ಹೇಗೆಂಬ ಚಿಂತೆಗೆ ಬಿದ್ದಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್​ಗೆ 2200ರಿಂದ 2400 ರೂ. ಇದ್ದ ಮೆಕ್ಕೆಜೋಳ ಈಗ 1000 ದಿಂದ 1200 ರೂ.ಗೆ ಕುಸಿದಿದೆ. ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಾಲ್​ಗೆ ಬರೋಬ್ಬರಿ ಸಾವಿರ ರೂ. ನಷ್ಟವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 700 ಹೆಕ್ಟೇರ್​ಗೂ ಹೆಚ್ಚು ಮೆಕ್ಕೆಜೋಳ ಪ್ರದೇಶವಿದೆ. ಪ್ರತಿ ಹೆಕ್ಟೇರ್​ಗೆ 60 ರಿಂದ 70 ಕ್ವಿಂಟಾಲ್ ಮೆಕ್ಕೆಜೋಳ ಇಳುವರಿಯಿದ್ದು, ಪ್ರತಿ ಹೆಕ್ಟೇರ್​ಗೆ ಅಂದಾಜು 60 ಸಾವಿರ ರೂ.ಗೂ ಹೆಚ್ಚು ಬಂಡವಾಳ ಹಾಕಲಾಗಿದೆ. ಈಗಿರುವ ಸಾವಿರ ರೂಪಾಯಿ ಮಾರಾಟ ಮಾಡಿದರೆ, ಕ್ವಿಂಟಾಲ್ ಮೇಲೆ 500 ರೂ.ನಷ್ಟು ಬಂಡವಾಳ ನಷ್ಟವಾಗಲಿದೆ.

ಭತ್ತದ ಕೃಷಿಯಿಂದ ವಿಮುಖರಾದ ಹಲವು ರೈತರು ಕಡಿಮೆ ನೀರು ಬೇಡುವ ಮೆಕ್ಕೆಜೋಳ ಕೃಷಿಯತ್ತ ಹೊರಳಿದ್ದರು. ಆದರೆ, ಇನ್ನೇನು ಮಾರುಕಟ್ಟೆಗೆ ಉತ್ಪನ್ನ ಕೊಂಡೊಯ್ಯಬೇಕು ಎನ್ನುವಷ್ಟರಲ್ಲಿ ಕರೊನಾ ಲಾಕ್​ಡೌನ್​ನಿಂದ ಹೊಡೆತ ಬಿದ್ದಿದೆ. ಕೆಲ ಬೆಳೆಗಾರರು ಕುಂಡಿಗೆಯಿಂದ ಕಾಳನ್ನು ಬೇರ್ಪಡಿಸಿ ಇಟ್ಟರೆ, ಇನ್ನೂ ಕೆಲ ಬೆಳೆಗಾರರು ತೆನೆ ಸಮೇತ ಇಟ್ಟುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸರಾಸರಿ 50 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಉತ್ಪಾದನೆಯಿದ್ದು, ಮಧ್ಯವರ್ತಿಗಳು ತೀರಾ ಕಡಿಮೆ ದರಕ್ಕೆ ಖರೀದಿಸಲು ಬೆಳೆಗಾರರಿಗೆ ಒತ್ತಡ ಹಾಕುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ದರ ಕುಸಿತವಾಗಲಿದೆ. ಹಾಗಾಗಿ ಈಗಿನ ದರಕ್ಕೆ ಜೋಳ ಮಾರಿಬಿಡಿ ಎಂದು ಮಧ್ಯವರ್ತಿಗಳು ಹೇಳುತ್ತಿರುವ ಕಾರಣ ಬೆಳೆಗಾರರು ಗೊಂದಲದಲ್ಲಿದ್ದಾರೆ.

ರೈತರು ಬೆಳೆದಿರುವ ಮೆಕ್ಕೆಜೋಳಕ್ಕೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಖರೀದಿ ಕೇಂದ್ರ ಆರಂಭಿಸಬೇಕು. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು. ಆಯಾ ಕ್ಷೇತ್ರದ ಶಾಸಕರು ಸರ್ಕಾರದ ಹಂತದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯ ಹಾಕಬೇಕು. | ರಾಜೇಶ ಪಾಟೀಲ ಮೆಕ್ಕೆಜೋಳ ಬೆಳೆಗಾರ ರಾಜ್ಯ ಸರ್ಕಾರ ಹೆಕ್ಟೇರ್ ಮೆಕ್ಕೆಜೋಳಕ್ಕೆ ಪರಿಹಾರ ಧನವಾಗಿ 5 ಸಾವಿರ ರೂಪಾಯಿ ಘೊಷಿಸಿದೆ. ಆದರೆ, ಕೃಷಿ ಇಲಾಖೆಗೆ ಈವರೆಗೆ ಮಾರ್ಗಸೂಚಿ ಬಂದಿಲ್ಲ. ಅದು ಬಂದ ನಂತರ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಪರಿಹಾರ ಧನ ವಿತರಿಸಲಾಗುವುದು. | ಮಧುಕರ ನಾಯ್ಕ ಕೃಷಿ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net