

ಶಿರಸಿ: ಕೆರೆ ಪುನರುಜ್ಜೀವನ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಇಲ್ಲಿನ ಮನುವಿಕಾಸ ಸಂಸ್ಥೆಯು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗ ಹಾಗೂ ವಿಧವೆಯರ ಸಹಾಯಕ್ಕೆ ಮುಂದಾಗಿದೆ. 23 ಲಕ್ಷ ರೂಪಾಯಿಗಳನ್ನು ಸಂಸ್ಥೆಯು ಸಾಮಾಜಿಕ ಕಾರ್ಯಕ್ಕಾಗಿ ವಿನಿಯೋಗಿಸಲು ನಿರ್ಧರಿಸಿದೆ.
ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ತಡೆಗಟ್ಟಲು ಲಾಕ್ಡೌನ್ ಜಾರಿಯಾಗಿದ್ದು, ಇದರಿಂದ ಬಡವರು, ಶ್ರಮಿಕರು, ಕೂಲಿಕಾರರು, ವಿಧವೆಯರು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಇದನ್ನು ನಿವಾರಿಸಲು ಮನುವಿಕಾಸ ಸಂಸ್ಥೆಯು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕುಗಳ 1500 ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲು ಆರಂಭಿಸಿದೆ. ತಲಾ ಕುಟುಂಬಕ್ಕೆ 25 ಕೆ.ಜಿ. ಅಕ್ಕಿ, 3 ಕೆ.ಜಿ. ತೊಗರಿಬೇಳೆ, 2 ಕೆ.ಜಿ. ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆ, 4 ಕೆ.ಜಿ. ಬಟಾಟೆ, 4 ಕೆ.ಜಿ. ಈರುಳ್ಳಿ, 2 ಸೋಪ್, 1/2 ಕೆ.ಜಿ. ಮೆಣಸಿನ ಪುಡಿ, 2 ಕೆ.ಜಿ. ಅಡುಗೆ ಉಪ್ಪನ್ನು ಒಳಗೊಂಡ 2200 ರೂ., ಮೊತ್ತದ ಕಿಟ್ ಅನ್ನು ವಿತರಿಸಲಾಗುತ್ತಿದೆ. ಪ್ರತಿ ದಿನ 100ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಶಿರಸಿಯ ದೊಡ್ನಳ್ಳಿ, ದೇವನಿಲಯ, ಖಾಜಿಗಲ್ಲಿ, ಸಿದ್ದಾಪುರದ ಕಾನಸೂರು ಸೇರಿ ವಿವಿಧೆಡೆ ಕಿಟ್ ನೀಡಲಾಗಿದೆ.
ಅರ್ಹ ಕುಟುಂಬಗಳ ಆಯ್ಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಫಲಾನುಭವಿಗಳ ಕುಟುಂಬವನ್ನು ಗುರುತಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ (9845982552) ಸಂರ್ಪಸಬಹುದಾಗಿದೆ.