ಶ್ರೀಸಂಪಿಗೇಶ್ವರಸ್ವಾಮಿ ದೇಗುಲದಲ್ಲಿ ಹಾಲರವೆ ಉತ್ಸವ

26 HANUR 2 B
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ದೊಡ್ಡ ಸಂಪಿಗೇಶ್ವರಸ್ವಾಮಿ ದೇಗುಲದಲ್ಲಿ 25ನೇ ವರ್ಷದ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಾಲರವೆ ಉತ್ಸವ ಹಾಗೂ ಬಾಯಿಬೀಗ ಸೇವೆ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ಅಂಗವಾಗಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದು, ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಫೆ.19ರಂದು ದೇಗುಲದ ಮುಂಭಾಗದಲ್ಲಿ ಅಗ್ನಿಕುಂಡದ ಕಂಬವನ್ನು ಹಾಕಲಾಗಿದ್ದು, ಮಂಗಳವಾರ ಸಂಜೆ 7.30ರಿಂದ ರಾತ್ರಿ 10ರವರೆಗೆ ಭಕ್ತರಿಂದ ಜಾಗರವನ್ನು ದೇಗುಲಕ್ಕೆ ಸಮರ್ಪಿಸಲಾಯಿತು. ಬುಧವಾರ ಬೆಳಗ್ಗೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅರ್ಚಕರು, ಭಕ್ತರು ಹಾಗೂ ಗ್ರಾಮಸ್ಥರೊಂದಿಗೆ ಗ್ರಾಮದೊಳಗಿರುವ ಶ್ರೀಆದಿಶಕ್ತಿ ಮಾರಮ್ಮನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ನೀರು ತುಂಬಿದ ಕಳಸ ಹಾಗೂ ಕಬ್ಬಿಣದ ಸಲಾಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 9.30ರಲ್ಲಿ ಹಾಲರುವಿ ಉತ್ಸವ ಹಾಗೂ ಬಾಯಿಬೀಗ ಸೇವೆಗೆ ಚಾಲನೆ ನೀಡಲಾಯಿತು.

ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಕುಂಭಕಳಸವನ್ನು ಹೊತ್ತ ಹೆಣ್ಣು ಮಕ್ಕಳು, ಸಣ್ಣ ಬಾಯಿ ಬೀಗವನ್ನು ಹಾಕಿಸಿಕೊಂಡ ಮಹಿಳಾ ಭಕ್ತರು ಹಾಗೂ ದೊಡ್ಡ ಬಾಯಿಬೀಗ ಹಾಕಿಸಿಕೊಂಡ ಭಕ್ತರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ಸಾಗಿದರು.

ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಬಾಯಿಬೀಗ ಸೇವೆಯನ್ನು ಕಣ್ತುಂಬಿಕೊಂಡು ವಿಸ್ಮಯ ವ್ಯಕ್ತಪಡಿಸಿದರು. ಬಳಿಕ ದೇಗುಲದಲ್ಲಿ ಸ್ವಾಮಿಗೆ ಮಜ್ಜನ ಸೇವೆಯನ್ನು ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಿ ಪೂಜೆ ಸಲ್ಲಿಸಲಾಯಿತು.

ದೇಗುಲದ ವತಿಯಿಂದ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಇಂದು ಅಗ್ನಿಕುಂಡ ದರ್ಶನ ದೇಗುಲದ ಮುಂಭಾಗದಲ್ಲಿ ಈಗಾಗಲೇ ಅಗ್ನಿಕುಂಡದೊಂದಿಗೆ ಕಂಬವನ್ನು ಹಾಕಲಾಗಿದ್ದು, ಗುರುವಾರ ಬೆಳಗ್ಗೆ 6 ಗಂಟೆಗೆ 6 ತಿಂಗಳ ಮಗುವಿನ ಹಸ್ತ ಸ್ಪರ್ಶದ ನಂತರ ಅಗ್ನಿಕುಂಡ ದರ್ಶನವನ್ನು ನೆರವೇರಿಸಲಾಗುತ್ತದೆ. ಬಳಿಕ ಮಹಾ ಮಂಗಳಾರತಿ ಬೆಳಗಿಸಲಾಗುತ್ತದೆ. ಈ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net